ಡಿಜಿ ಲಾಕರ್ ವೇದಿಕೆಗಳಲ್ಲಿ ನೀಡಲಾಗುವ ಪದವಿ ಪ್ರಮಾಣ ಪತ್ರ, ಅಂಕಪಟ್ಟಿಗಳಂತಹ ಶೈಕ್ಷಣಿಕ ದಾಖಲೆಗಳು ಮಾನ್ಯ ದಾಖಲೆಗಳಾಗಿವೆ ಎಂದು ಯುಜಿಸಿ ಮಾಹಿತಿ ನೀಡಿದ್ದು, ಇಂತಹ ದಾಖಲೆಗಳನ್ನು ಸ್ವೀಕರಿಸುವಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಭಾರತದಲ್ಲಿ ಅನೇಕರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಶಿಕ್ಷಣ ಮಂಡಳಿಗಳು ಡಿಜಿಟಲ್ ದಾಖಲೆಗಳನ್ನು ನೀಡುತ್ತಿವೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಹಾಗೂ ಹಲವಾರು ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಈಗಾಗಲೇ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರಗಳಂತಹ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ನೀಡುತ್ತಿವೆ.
ನ್ಯಾಷನಲ್ ಅಕಾಡೆಮಿಕ್ ಡಿಪಾಸಿಟರಿ ಡಿಜಿಟಲ್ ಸ್ವರೂಪದಲ್ಲಿ ಶೈಕ್ಷಣಿಕ ದಾಖಲೆಗಳನ್ನು ಆನ್ಲೈನ್ಲ್ಲಿ ಸ್ಟೋರ್ ಮಾಡುತ್ತದೆ. ಶಿಕ್ಷಣ ಸಚಿವಾಲಯವು ಡಿಜಿಲಾಕರ್ ಸಹಕಾರದೊಂದಿಗೆ ಎನ್ಎಡಿಯನ್ನು ಶಾಶ್ವತ ಯೋಜನೆಯಾಗಿ ಜಾರಿಗೆ ತರಲು ಯುಜಿಸಿಗೆ ಸೂಚನೆ ನೀಡಿದೆ ಎಂದು ಆಯೋಗ ಹೇಳಿದೆ.
ನ್ಯಾಷನಲ್ ಅಕಾಡೆಮಿಕ್ ಡಿಪಾಸಿಟರಿ ಶೈಕ್ಷಣಿಕ ಪ್ರಶಸ್ತಿಗಳ ಆನ್ಲೈನ್ ಸ್ಟೋರ್ಹೌಸ್ ಆಗಿದೆ. ಇದು ಯಾವುದೇ ಭೌತಿಕ ದಾಖಲೆ ಪತ್ರಗಳಿಲ್ಲದೇ ಎಲ್ಲಿಯಾದರೂ, ಯಾವುದೇ ಸಮಯದಲ್ಲಾದರೂ ಮೂಲ ವಿತರಕರಿಂದ ನೇರವಾಗಿ ಡಿಜಿಟಲ್ ಸ್ವರೂಪದಲ್ಲಿ ಅಧಿಕೃತ ದಾಖಲೆಗಳು ಅಥವಾ ಪ್ರಮಾಣ ಪತ್ರಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಯುಜಿಸಿ ಹೇಳಿದೆ.
ಡಿಜಿಲಾಕರ್ ಫ್ಲಾಟ್ಫಾರಂ ವಿದ್ಯಾರ್ಥಿಗಳ ಪದವಿ, ಅಂಕಪಟ್ಟಿ ಸೇರಿದಂತೆ ಇತರೆ ದಾಖಲೆಗಳನ್ನು ಮೂಲ ವಿತರಕರು ಡಿಜಿಲಾಕರ್ ಎನ್ಎಡಿ ಫ್ಲಾಟ್ಫಾರಂ ಮೂಲಕ ಅಪ್ಲೋಡ್ ಮಾಡಿದ ಎಲೆಕ್ಟ್ರಾನಿಕ್ ದಾಖಲೆಗಳಾಗಿವೆ. ಈ ಎಲೆಕ್ಟ್ರಾನಿಕ್ ದಾಖಲೆಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ನಿಬಂಧನೆಗಳ ಅಡಿಯಲ್ಲಿ ಮಾನ್ಯತೆ ಪಡೆದ ದಾಖಲೆಗಳಾಗಿವೆ ಎಂದು ಆಯೋಗ ಹೇಳಿದೆ.