ನವದೆಹಲಿ: ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ)ದಿಂದ ಅನುದಾನ ಪಡೆಯಲು ಹೊಸ ನಿಯಮ ರೂಪಿಸಲಾಗಿದೆ.
ಕಾಲೇಜುಗಳು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ(NAC), ನ್ಯಾಷನಲ್ ಬೋರ್ಡ್ ಆಫ್ ಆಕ್ರಿಡಿಟೇಶನ್(NBA) ಅಥವಾ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ(NIRF) ರೇಟಿಂಗ್ ಹೊಂದಿರುವುದು ಕಡ್ಡಾಯವಾಗಿದೆ. ಈ ಮೂಲಕ ಯುಜಿಸಿ ಅನುದಾನ ಪಡೆಯಲು ಹೊಸ ನಿಯಮ ಜಾರಿಗೊಳಿಸಲಾಗಿದೆ.
ಪ್ರಸ್ತುತ ಜಾರಿಯಲ್ಲಿರುವ ಯುಜಿಸಿ ಕಾಯ್ದೆಗೆ ಹೊಸ ನಿಯಮ ಸೇರ್ಪಡೆ ಮಾಡಲಾಗಿದ್ದು, ಶಿಕ್ಷಣ ಸಂಸ್ಥೆಗಳು ಯುಜಿಸಿಯಿಂದ ಅನುದಾನಕ್ಕೆ ಅರ್ಹತೆ ಹೊಂದಲು ಪೂರೈಸಬೇಕಿರುವ ಮಾನದಂಡಗಳ ಬಗ್ಗೆ ಹೊಸ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
ಯುಜಿಸಿ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಅರ್ಹತೆ ಹೊಂದಿದ ಕಾಲೇಜುಗಳ ಸಂಖ್ಯೆ ಹೆಚ್ಚಳ, ಶಿಕ್ಷಕರನ್ನು ನೇಮಿಸಿಕೊಳ್ಳುವುದು, ಯುಜಿಸಿ ಮತ್ತು ರಾಜ್ಯ ಸರ್ಕಾರದ ವೇತನ ಶ್ರೇಣಿಗಳನ್ನು ಅನುಸರಿಸುವ ಮೂಲಕ ಬೋಧನೆಯ ಗುಣಮಟ್ಟ ಹೆಚ್ಚಿಸುವುದು ಹೊಸ ನಿಯಮದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.