ಬೆಂಗಳೂರು: ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಘಟಿಕೋತ್ಸವ ಸಮಾರಂಭಗಳಲ್ಲಿ ಕೈಮಗ್ಗದ ಉಡುಪುಗಳನ್ನು ಧರಿಸುವಂತೆ ಯುಜಿಸಿ ಮತ್ತೆ ಸೂಚನೆ ನೀಡಿದೆ.
ಈ ಹಿಂದೆ ಕೂಡ ಕೈಮಗ್ಗದ ಉಡುಪುಗಳ ಬಳಕೆಗೆ ಸೂಚನೆ ನೀಡಿದ್ದರೂ ಬಹುತೇಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಳವಡಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಸುತ್ತೋಲೆ ಹೊರಡಿಸಲಾಗಿದೆ. ವಿದ್ಯಾಸಂಸ್ಥೆಗಳು ಕೈಮಗ್ಗದ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಕೈಮಗ್ಗದ ಉಡುಪುಗಳನ್ನೇ ಬಳಕೆ ಮಾಡುವಂತೆ ತಿಳಿಸಲಾಗಿದೆ.
ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆಯುವ ವಿಶೇಷ ಸಂದರ್ಭಗಳಾದ ಘಟಿಕೋತ್ಸವ, ವಾರ್ಷಿಕೋತ್ಸವ ಸಂದರ್ಭದಲ್ಲಿ ಭಾರತದ ವಾತಾವರಣಕ್ಕೆ ಅನುಗುಣವಾಗುವಂತಹ ಕೈಮಗ್ಗದಿಂದ ರಚಿಸಿದ ಉಡುಪುಗಳನ್ನು ಧರಿಸುವುದು ಉತ್ತಮ. ಇದು ಭಾರತದ ಗೌರವ ಹೆಚ್ಚಿಸುವ ಜೊತೆಗೆ ಸಾಕಷ್ಟು ಜನರ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ. ಈ ಬಗ್ಗೆ ಕಾಲೇಜು ಮತ್ತು ವಿವಿ ತೆಗೆದುಕೊಂಡ ತೀರ್ಮಾನಗಳನ್ನು ಫೋಟೋ ಮತ್ತು ವಿಡಿಯೋ ಸಹಿತ ಯುಜಿಸಿಗೆ ಕಳುಹಿಸಲು ತಿಳಿಸಲಾಗಿದೆ.