‘ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ’ ಎಂಬ ಕವಿವಾಣಿಯಂತೆ ಯುಗಾದಿ ಹೊಸ ವರ್ಷದ ಮೊದಲ ಹಬ್ಬ. ಇದನ್ನು ದೊಡ್ಡ ಹಬ್ಬ ಎಂದೂ ಕರೆಯುತ್ತಾರೆ. ಯುಗಾದಿ ಹಬ್ಬವೆಂದರೆ ಹೊಸತು ಮೇಳೈಸುತ್ತದೆ.
ಈ ಸಂದರ್ಭದಲ್ಲಿ ಪ್ರಕೃತಿಯಲ್ಲಿ ಬದಲಾವಣೆ ಕಾಣಬಹುದು. ಮರ- ಗಿಡಗಳೆಲ್ಲಾ ಚಿಗುರಿರುತ್ತವೆ. ಹಳೆಯದಲ್ಲಾ ಬದಲಾಗಿ ಹೊಸತನ್ನು ಕಾಣುವ ಸಂಭ್ರಮ. ಮನೆಗಳಿಗೆ ಸುಣ್ಣ ಬಣ್ಣ ಬಳಿದರೆ. ಹಬ್ಬದ ದಿನಕ್ಕೆ ಬೇಕಾದ ತಯಾರಿಯನ್ನು ಮೊದಲೇ ಮಾಡಿಕೊಳ್ಳಲಾಗಿರುತ್ತದೆ.
ಹೊಸ ಬಟ್ಟೆ, ಮಾವಿನ ತೋರಣ, ಹೋಳಿಗೆ, ಚಂದ್ರನನ್ನು ನೋಡುವುದು ಯುಗಾದಿಯ ವಿಶೇಷವಾಗಿದೆ. ಅದರಲ್ಲಿಯೂ ಗ್ರಾಮಾಂತರ ಪ್ರದೇಶದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.
ದೂರದಲ್ಲಿರುವ ಮನೆಯ ಕುಟುಂಬ ಸದಸ್ಯರು ಊರಿಗೆ ಬರುತ್ತಾರೆ. ಎಲ್ಲರೂ ಸೇರಿ ಹಬ್ಬ ಆಚರಿಸುತ್ತಾರೆ. ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿಕೊಂಡು ಎಲ್ಲರೂ ಸಂಭ್ರಮಿಸುತ್ತಾರೆ. ಚಂದ್ರನನ್ನು ನೋಡಿ, ಹಿರಿಯರಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಬೇವು- ಬೆಲ್ಲ ಯುಗಾದಿಯ ವಿಶೇಷ. ಜೀವನದಲ್ಲಿ ಕಷ್ಟ – ಸುಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬುದು ಇದರ ಸಾರ. ಒಟ್ಟಾರೆ, ಯುಗಾದಿ ಎಂದರೆ ಸಂಭ್ರಮವೇ ಸಂಭ್ರಮ.