ದಕ್ಷಿಣ ಭಾರತದ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಒಂದು. ಯುಗಾದಿ ಅಂದ್ರೆ ಹೊಸ ವರ್ಷದ ಆರಂಭ. ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಯುಗಾದಿ ಹಬ್ಬದ ಸಡಗರ ಮನೆ ಮಾಡಿದೆ. ಈ ಬಾರಿ ಮಾ. 22ರಂದು ಯುಗಾದಿ ಆಚರಿಸಲಾಗ್ತಿದೆ. ಯುಗಾದಿ ಹಬ್ಬ ಆಚರಣೆಗೆ ಕೆಲವು ಪುರಾಣ ಕಥೆಗಳಿವೆ.
ಬ್ರಹ್ಮಪುರಾಣದ ಪ್ರಕಾರ ಶಿವನು ಬ್ರಹ್ಮನಿಗೆ ಶಾಪ ನೀಡಿದ್ದನಂತೆ. ಭೂಮಿ ಮೇಲೆ ಬ್ರಹ್ಮನ ಪೂಜೆ ಮಾಡದಿರುವಂತೆ ಶಿವ ಶಾಪ ನೀಡಿದ್ದನಂತೆ. ಆದ್ರೆ ಯುಗಾದಿ ದಿನ ಮಾತ್ರ ಆಂಧ್ರಪ್ರದೇಶದಲ್ಲಿ ಬ್ರಹ್ಮನ ಪೂಜೆ ನಡೆಯುತ್ತದೆ. ಅಂದು ಬ್ರಹ್ಮ ಭೂಮಿಗೆ ಬರ್ತಾನೆಂಬ ನಂಬಿಕೆ ಅಲ್ಲಿನ ಜನರಿಗಿದೆ. ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಕಥೆಯೂ ಇದೆ. ವಿಷ್ಣುವು ಯುಗಾದಿ ದಿನ ಮತ್ಸ್ಯ ಅವತಾರ ತಾಳಿದ್ದನಂತೆ.
ಯುಗಾದಿ ದಿನ ಎಣ್ಣೆ ಸ್ನಾನಕ್ಕೆ ಮಹತ್ವವಿದೆ. ಬೆಳಿಗ್ಗೆ ಬೇಗ ಎದ್ದು, ನಿತ್ಯ ಕರ್ಮ ಮುಗಿಸಿ ಕೈ-ಮೈಗೆ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಲಾಗುತ್ತದೆ. ಇದ್ರ ನಂತ್ರ ಹೊಸ ಬಟ್ಟೆ ಧರಿಸಿ, ದೇವಸ್ಥಾನಕ್ಕೆ ಹೋಗ್ತಾರೆ. ಮನೆ ಮುಂದೆ ರಂಗೋಲಿ ಹಾಕಿ, ತೋರಣ ಕಟ್ಟಿ, ಹಬ್ಬವನ್ನು ಸಂಭ್ರಮಿಸುವವರಿದ್ದಾರೆ. ಬೇವು –ಬೆಲ್ಲವನ್ನು ತಯಾರಿಸಿ ದೇವರಿಗೆ ಅರ್ಪಿಸಿ ನಂತ್ರ ಅದರ ಸೇವನೆ ಮಾಡಲಾಗುತ್ತದೆ. ಹೊಸ ವರ್ಷದಲ್ಲಿ ಬೇವಿನ ಜೊತೆ ಬೆಲ್ಲವೂ ಇರಲಿ ಅಂದ್ರೆ ದುಃಖದ ಜೊತೆ ಸಂತೋಷ ತುಂಬಿರಲಿ ಎನ್ನುವ ಕಾರಣಕ್ಕೆ ಬೇವು –ಬೆಲ್ಲ ನೀಡಲಾಗುತ್ತದೆ. ಮನೆಯಲ್ಲಿ ಸಿಹಿ ತಯಾರಿಸಿ ಎಲ್ಲರೂ ಸೇರಿ ಹಬ್ಬ ಆಚರಿಸುತ್ತಾರೆ. ಯುಗಾದಿಯನ್ನು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ.