ಬೆಂಗಳೂರು: ಇಂಜಿನಿಯರಿಂಗ್, ವೈದ್ಯಕೀಯ ಸೇರಿ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅಭ್ಯರ್ಥಿಗಳು ಸಲ್ಲಿಸಿದ ಯುಜಿ ಸಿಇಟಿ 2024 ಆನ್ಲೈನ್ ಅರ್ಜಿಯಲ್ಲಿ ಕ್ಲೇಮು ಮಾಡಿರುವ ವಿವಿಧ ಮೀಸಲಾತಿಗಳಿಗೆ ಅನುಗುಣವಾಗಿ ಆನ್ಲೈನ್ ಪರಿಶೀಲನೆ ನಡೆಸಲಾಗಿದ್ದು, ಅದರ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಅಭ್ಯರ್ಥಿಗಳು ಕ್ಲೇಮು ಮಾಡಿರುವಂತೆ ಕನ್ನಡ ಮಾಧ್ಯಮ, ವ್ಯಾಸಂಗ, ಗ್ರಾಮೀಣ ವ್ಯಾಸಂಗದ ವಿವರಗಳನ್ನು ಪರಿಶೀಲಿಸಲಾಗಿದೆ. ಜಾತಿ ಆದಾಯ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆ ಆಧರಿಸಿ ಮೀಸಲಾತಿ, ಧಾರ್ಮಿಕ ಅಲ್ಪಸಂಖ್ಯಾತ ಇತರೆ ಮಾಹಿತಿಯನ್ನು ಆಯಾ ಇಲಾಖೆಯ ವೆಬ್ ಸರ್ವಿಸ್ ಮೂಲಕ ಪರಿಶೀಲಿಸಲಾಗಿದೆ.
ಪರಿಶೀಲನೆಯ ವಿವರಗಳನ್ನು ಪ್ರಾಧಿಕಾರದ ವೆಬ್ಸೈಟ್ ನ ಲಿಂಕ್ ನಲ್ಲಿ ನೀಡಲಾಗಿದ್ದು, ಅಭ್ಯರ್ಥಿಗಳು ನಿಗದಿತ ಲಿಂಕ್ ನಲ್ಲಿ ತಮ್ಮ ಅರ್ಜಿ ಸಂಖ್ಯೆ, ಜನ್ಮ ದಿನಾಂಕ ನಮೂದಿಸಿ ವಿವರ ನೋಡಬಹುದು. ವೆರಿಫಿಕೇಶನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಲಿಂಕ್ ಅನ್ನು ಸದ್ಯದಲ್ಲೇ ಸಕ್ರಿಯಗೊಳಿಸಲಾಗುತ್ತದೆ.
ಅಭ್ಯರ್ಥಿಗಳು ವೇಳಾಪಟ್ಟಿಯ ಅನುಸಾರ ವೇರಿಫಿಕೇಷನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಬೇಕು ಆದ್ಯತಾ ಕ್ರಮದಲ್ಲಿ ಆಸಕ್ತಿ ಇರುವ ಕಾಲೇಜ್, ಕೋರ್ಸ್ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ಹೇಳಲಾಗಿದೆ.