ಉಡುಪಿ: ದಟ್ಟಾರಣ್ಯದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಯುವಕನೊಬ್ಬ 8 ದಿನಗಳ ಬಳಿಕ ಪ್ರತ್ಯಕ್ಷನಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆ ಬೈಲ್ ಗ್ರಾಮದಲ್ಲಿ ನಡೆದಿದೆ.
27 ವರ್ಷದ ವಿವೇಕಾನಂದ ಎಂಬ ಯುವಕ ಎಂದಿನಂತೆ ದನಗಳಿಗೆ ಸೊಪ್ಪು ತರಲೆಂದು ಕಾಡಿಗೆ ಹೋಗಿದ್ದ. ಹೀಗೆ ಹೋಗುವಾಗ ಆತನ ಮೂರು ನಾಯಿಗಳು ಹೋಗಿದ್ದವು. ಕಾಡಿನಲ್ಲಿ ಸ್ವಲ್ಪ ದೂರ ಸಾಗುತ್ತಿದ್ದಂತೆ ವರುಣಾರ್ಭಟ ಜೋರಾಗಿದ್ದು, ವಿವೇಕಾನಂದನ ಜೊತೆಗೆ ತೆರಳಿದ್ದ ಎರಡು ನಾಯಿಗಳು ಮನಗೆ ವಾಪಸ್ ಆಗಿವೆ. ಆದರೆ ಒಂದು ನಾಯಿ ವಿವೇಕಾನಂದ ಜೊತೆಯೆ ಕಾಡಿನಲ್ಲಿಯೇ ನಿಂತಿದೆ.
ಮಳೆಯಿಂದ ರಕ್ಷಿಸಿಕೊಳ್ಳಲು ವಿವೇಕಾನಂದ ಕಾಡಿನ ಮಧ್ಯೆ ಬಂಡೆಗಳ ಕೆಳಗೆ ಆಶ್ರಯ ಪಡೆದಿದ್ದಾನೆ. ಸಂಜೆಯಾದರೂ ಮಳೆಯ ಆರ್ಭಟ ನಿಂತಿಲ್ಲ. ನಾಯಿಯೊಂದಿಗೆ ಬಂಡೆಯ ಕೆಳಗೆ ಆಶ್ರಯ ಪಡೆದಿದ್ದ ವಿವೇಕಾನಂದ ಸಂಕಷ್ಟಕ್ಕೀಡಾಗಿದ್ದಾನೆ. ಮಳೆ ನಿಲ್ಲುವಷ್ಟರಲ್ಲಿ ಕತ್ತಲು ಆವರಿಸಿದೆ. ಒಂದೆಡೆ ದಟ್ಟಾರಣ್ಯ…ಮತ್ತೊಂದೆಡೆ ಕಗ್ಗತ್ತಲು… ಅಬ್ಬರಿಸಿ ಬೊಬ್ಬಿರಿದಿದ್ದ ವರುಣ ಆಗಷ್ಟೇ ತಣ್ಣಗಾಗಿದ್ದರೂ ಕಾಡು ಪ್ರಾಣಿಗಳ ಭೀತಿ….ಭಯದಿಂದ ಕಂಗೆಟ್ಟ ಯುವಕ ಮನೆದಾರಿ ತಪ್ಪಿದ್ದಾನೆ.
ಇತ್ತ ವಿವೇಕಾನಂದನ ಮನೆಯವರು ಎಂದಿನಂತೆ ಸೊಪ್ಪು ತರಲು ಹೋದ ಮಗ ಮನೆಗೆ ಬಾರದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ಅಕ್ಕಪಕ್ಕದ ಮನೆಯವರ ಜೊತೆ ಸುತ್ತಮುತ್ತ, ಕಾಡಂಚಿನಲ್ಲಿ ಹುಡುಕಾಟ ನಡೆಸಿದ್ದಾರೆ. ಮಾರನೆ ದಿನವಾದರೂ ಮಗನ ಸುಳಿವಿಲ್ಲ… ಕಾಡಿಗೆ ಹೋದ ಮಗ ವಾಪಸ್ ಆಗದಿರುವುದನ್ನು ಕಂಡು ಆತಂಕದಲ್ಲಿಯೇ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರು ಸೇರಿದಂತೆ ಗ್ರಾಮದ ನೂರಾರು ಜನರು ಇಡೀ ಕಾಡನ್ನೇ ಜಾಲಾಡಿದ್ದಾರೆ. ಎಲ್ಲಿಯೂ ಯುವಕ ವಿವೇಕಾನಂದನ ಪತ್ತೆಯಿಲ್ಲ… ಏಕಾಏಕಿ ನಾಪತ್ತೆಯಾದ ಮಗನ ಸುಳಿವಿಲ್ಲದೇ ಮನೆಯವರ ಆಕ್ರಂದನ, ಗೋಳಾಟ ಮುಗಿಲು ಮುಟ್ಟಿದೆ.
ಇನ್ನೇನು ಆಗುಂಬೆಯ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಬೇಕು ಎಂದು ಗ್ರಾಮದವರು, ಪೊಲೀಸರು ಸಜ್ಜಾಗಿದ್ದಾರೆ. ಕಾಡಿನಲ್ಲಿ ಎರಡು ಕಿ.ಮೀ ವರೆಗೆ ಹುಡುಗಾಟ ನಡೆಸುತ್ತಿದ್ದಂತೆ ವಿವೇಕಾನಂದ ತನ್ನ ನಾಯಿಯೊಂದಿಗೆ ಪ್ರತ್ಯಕ್ಷನಾಗಿದ್ದಾನೆ. ಮಗನನ್ನು ಕಂಡು ಮನೆಯವರಿಗೆ ಹೋದ ಜೀವ ಬಂದಂತಾಗಿದೆ. ದಟ್ಟಾರಣ್ಯದಲ್ಲಿ ಮನೆ ದಾರಿ ತಪ್ಪಿದ ವಿವೇಕಾನಂದ ಕಾಡಲ್ಲಿ ಅಲೆದಾಡಿದ್ದಾನೆ. 8 ದಿನಗಳಿಂದ ಅನ್ನಾಹಾರವಿಲ್ಲದೇ ಬಸವಳಿದು ಹೋಗಿದ್ದಾನೆ. ಜೊತೆಗೆ ಆತನ ನಾಯಿಯೂ ಬಳಲಿದೆ. 8 ದಿನಗಳಿಂದ ಬರಿ ನೀರನ್ನೇ ಕುಡಿದು ಬದುಕುಳಿದಿದ್ದಾನೆ. ಊಟ ಆಹಾರವಿಲ್ಲದೇ ಕಾಡಿನಲ್ಲಿ ನಿತ್ರಾಣಗೊಂಡಿದ್ದ ವಿವೇಕಾನಂದನಿಗೆ ಚಿಕಿತ್ಸೆ ನೀಡಿ ಮನೆಗೆ ಕರೆತರಲಾಗಿದೆ. 8 ದಿನಗಳಿಂದ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಮಗ ವಾಪಸ್ ಆಗಿದ್ದು ಕಂಡು ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.