ಮಂಗಳೂರು : ಉಡುಪಿ ಕಾಲೇಜು ವಿಡಿಯೋ’ ಪ್ರಕರಣವನ್ನು ಎಸ್ಐಟಿ ತನಿಖೆಗೆ ಕೊಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು ಏರ್ ಪೋರ್ಟ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಉಡುಪಿ ವಿಡಿಯೋ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದರು. ಮಹಿಳಾ ಆಯೋಗವೇ ಕಾಲೇಜಿನಲ್ಲಿ ಕ್ಯಾಮೆರಾ ಇಟ್ಟಿರಲಿಲ್ಲ ಎಂದು ಹೇಳಿದೆ, ಆದ್ದರಿಂದ ಪ್ರಕರಣವನ್ನು ಎಸ್ಐಟಿ ತನಿಖೆಗೆ ಕೊಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ., ಅದು ಪೂರ್ಣಗೊಂಡ ನಂತರ, ತನಿಖಾ ವರದಿ ಬರುತ್ತದೆ. ಬಳಿಕ ಘಟನೆ ಕುರಿತು ಸತ್ಯಾಸತ್ಯತೆ ಗೊತ್ತಾಗುತ್ತದೆ. ಈಗಾಗಲೇ, ರಾಷ್ಟ್ರೀಯ ಮಹಿಳಾ ಆಯೋಗವು ಬಂದು ಪರಿಶೀಲನೆ ಮಾಡಿದ್ದು, ಕಾಲೇಜಿನ ಶೌಚಗೃಹದಲ್ಲಿ ಕ್ಯಾಮರಾ ಇಟ್ಟಿರಲಿಲ್ಲ ಎಂದಿದ್ದಾರೆ. ತನಿಖಾ ವರದಿ ಬಂದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದರು.
ಸೌಜನ್ಯ ಪ್ರಕರಣದ ಮರು ತನಿಖೆ
ಮಂಗಳೂರು ಏರ್ ಪೋರ್ಟ್ ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಸೌಜನ್ಯಾಳ ಪೋಷಕರು ಮರು ತನಿಖೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಾನೂನು ಪ್ರಕಾರ ಏನಾಗಬೇಕು ಅಂತ ನೋಡಿ ಮುಂದಿನ ನಿರ್ಧಾರವನ್ನು ಮಾಡುತ್ತೇವೆ. ಸೌಜನ್ಯಾಳ ಪೋಷಕರು ಕೋರ್ಟ್ನ ಆದೇಶ ಕಾಪಿ ತಂದು ಕೊಟ್ಟಿದ್ದಾರೆ. ನಾನು ಒಬ್ಬ ಲಾಯರ್ ಆಗಿ ಜಡ್ಜ್ಮೆಂಟ್ ಕಾಪಿಯನ್ನು ಓದಿ ನೋಡುತ್ತೇನೆ, ಬಳಿಕ ಹೈಕೋರ್ಟ್ಗೆ ಮೇಲ್ಮನವಿಗೆ ಹೋಗಲು ಅವಕಾಶ ಇದೆಯೇ ಎಂಬುದನ್ನು ನೋಡುತ್ತೇನೆ’ ಎಂದು ಸಿಎಂ ಹೇಳಿದ್ದಾರೆ. ಈ ಮೂಲಕ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಮರು ತನಿಖೆ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ.