ಉಡುಪಿ: ಕರ್ತವ್ಯ ನಿರತ ಸಬ್ ಇನ್ಸ್ ಪೆಕ್ಟರ್ ಹಾಗೂ ಗೃಹರಕ್ಷಕದಳ ವಾಹನದ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಗ್ಗೆ ಸಬ್ ಇನ್ಸ್ ಪೆಕ್ಟರ್ ಸುಷ್ಮಾ ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಸುಷ್ಮಾ, ಗೃಹರಕ್ಷಕ ದಳದ ಸಿಬ್ಬಂದಿ ಜಾವೇದ್ ಅವರೊಂದಿಗೆ ತೊಟ್ಟಂ, ಗುಜ್ಜರಬೆಟ್ಟು, ಕದಿಕೆ, ಬದನಿಡಿಯೂರು ಪ್ರದೇಶಗಳಲ್ಲಿ ಎಂದಿನಂತೆ ಗಸ್ತು ತಿರುಗುತ್ತಿದ್ದರು. ನಿನ್ನೆ ತಡ ರಾತ್ರಿ 2:15ರ ಸುಮಾರಿಗೆ ಹೋಡೆ ಶಾಲೆಯೊಂದರ ಬಳಿ 4-5 ಜನ ಯುವಕರ ಗುಂಪು ಕಿರುಚಾಡುತ್ತಾ ಗಲಾಟೆ ಮಾಡುತ್ತಿದ್ದರು. ಇದನ್ನು ಗಮನಿಸಿ ಸಬ್ ಇನ್ಸ್ ಪೆಕ್ಟರ್ ಸ್ಥಳಕ್ಕೆ ತೆರಳುತ್ತಿದ್ದಂತೆ ಕೆಲವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇಬ್ಬರು ಯುವಕರು ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಗೆ ಜೀವ ಬೆದರಿಕೆ ಹಾಕಿ ವಾಹನವನ್ನು ಅಡ್ಡಗಟ್ಟಿದ್ದಾರೆ. ಸಕ್ಲೇನ್ ಎಂಬಾತ ರಾಡ್ ನಿಂದ ಸಬ್ ಇನ್ಸ್ ಪೆಕ್ಟರ್ ಗೆ ಹೊಡೆಯಲು ಮುಂದಾಗಿದ್ದಾನೆ. ಇದೇ ವೇಳೆ ಇನ್ನೋರ್ವ ಪೊಲೀಸ್ ವಾಹನದ ಮೇಲೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಅಧಿಕಾರಿಗಳು ಶಾಲೆಗುಡ್ಡೆ ಪ್ರದೇಶಕ್ಕೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಪೊಲೀಸ್ ವಾಹನ ಜಖಂ ಗೊಂಡಿದೆ. ಈ ಹಿನ್ನೆಲೆಯಲ್ಲಿ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.