
ಉಡುಪಿ: ನಿಟ್ಟೂರಿನ ರಾಜ್ಯ ಸರ್ಕಾರಿ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಯುವತಿಯರಿಗೆ ವಿವಾಹ ನೆರವೇರಿಸಲಾಗಿದ್ದು, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ.ಕೆ. ಕನ್ಯಾದಾನ ಮಾಡಿಕೊಟ್ಟಿದ್ದಾರೆ.
2019ರಲ್ಲಿ ತುಮಕೂರು ಮೂಲದ ಹೆತ್ತವರಿಲ್ಲ ಶೀಲಾ (32) ನಿಟ್ಟೂರಿನ ಮಹಿಳಾ ನಿಲಯಕ್ಕೆ ಬಂದು ಆಶ್ರಯ ಪಡೆದಿದ್ದು. 2020ರಲ್ಲಿ ಭದ್ರಾವತಿ ಮೂಲದ ಹೆತ್ತವರಿಲ್ಲದ ಕುಮಾರಿ (21) ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದರು.
ಇದೀಗ ಆಶ್ರಯ ನಿಲಯದಲ್ಲಿ 24ನೇ ಮದುವೆಸಮಾರಂಭ ನಡೆದಿದ್ದು, ಯುವತಿ ಶೀಲಾ ಅವರನ್ನು ಕುಂದಾಪುರದ ಮೊಳಹಳ್ಳಿ ಬೆಡ್ರಾಡಿಯ ಗಣೇಶ ಶಾಸ್ತ್ರಿ ಅವರಿಗೆ ಹಾಗೂ ಕುಮಾರಿ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿಯ ಸತ್ಯನಾರಾಯಣ ಭಟ್ಟ ಅವರಿಗೆ ವಿವಾಹ ಮಾಡಿಕೊಡಲಾಯಿತು.
ವರ ಗಣೇಶ ಶಾಸ್ತ್ರಿ (42) ಕೃಷಿಕನಾಗಿದ್ದರೆ, ಸತ್ಯನಾರಾಯಣ ಭಟ್ಟ (29) ಉಡುಪಿ ಬೇಳಂಜೆ ದೇವಳದಲ್ಲಿ ಅರ್ಚಕರಾಗಿದ್ದಾರೆ. ಜಿಲಾಧಿಕಾರಿ ಡಾ.ಕೆ.ವಿದ್ಯಾ ಧಾರೆ ಎರೆದು ಕನ್ಯಾದಾನ ಮಾಡಿದರು. ರಾಜ್ಯ ಸರ್ಕಾರದಿಂದ ಮದುವೆಗೆ 20,000 ಹಣ ನೀಡಲಾಗಿದ್ದು, 5 ಸಾವಿರ ರೂಪಾಯಿಯನ್ನು ಮದುವೆ ವೆಚ್ಚಕ್ಕೆ ಹಾಗೂ ಉಳಿದ ತಲಾ 15,000 ರೂಪಾಯಿಯನ್ನು ವಧುವಿನ ಹೆಸರಲ್ಲಿ ಜೀವನ ಭದ್ರತೆಗೆ ಠೇವಣಿ ಇಡಲಾಗುತ್ತಿದೆ.
ಚಿನ್ನಾಭರಣ, ಸೀರೆ, ಊಟ ಇತ್ಯಾದಿಗಳನ್ನು ದಾನಿಗಳು ಒದಗಿಸಿದ್ದು ವಿಶೇಷವಾಗಿತ್ತು. ನಿಟ್ಟೂರಿನ ರಾಜ್ಯ ಸರ್ಕಾರಿ ಮಹಿಳಾ ನಿಲಯ 1976ರಿಂದ ಆರಂಭವಾಗಿದೆ. ಈ ನಿಲಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 63 ಮಹಿಳೆಯರು ಹಾಗೂ 5 ಮಕ್ಕಳು ಇದ್ದಾರೆ.