ಉಡುಪಿ: ಉಡುಪಿ ಜಿಲ್ಲೆಯ ನೇಜಾರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆ ಸಲ್ಲಿಸಿದ್ದ ಪೆರೋಲ್ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಿಧನರಾದ ತನ್ನ ಸಹೋದರ ನಿತಿನ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಪೆರೋಲ್ ನೀಡುವಂತೆ ಆರೋಪಿ ಚೌಗಲೆ, ಉಡುಪಿ ಜೆ ಎಂ ಎಫ್ ಸಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ತಾತ್ಕಾಲಿಕ ಬಿಡುಗಡೆಗೆ ಕೋರಿ ಮೂರು ಗಂಟೆಗಳ ಪೆರೋಲ್ ಕೇಳಿದ್ದ. ಆದರೆ ಆರೋಪಿ ಪೆರೋಲ್ ಮನವಿಯನ್ನು ಆಕ್ಷೇಪಿಸಿರುವ ಅಭಿಯೋಜಕ ಹೆಚ್.ಎಂ.ನದಾಫ್, ಆರೋಪಿ ಬಿಡುಗಡೆಯಾದರೆ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುವ ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಆರೋಪಿ ತನ್ನ ಸಹೋದರನ ಮರಣ ಪ್ರಮಾಣ ಪತ್ರ ಸಲ್ಲಿಸಲು ವಿಫಲನಾಗಿದ್ದು, ಆತನ ಮನವಿ ನ್ಯಾಯ ಸಮ್ಮತವೇ ಎಂಬುದು ಅನುಮಾನವಾಗಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯ ಪೆರೋಲ್ ಅರ್ಜಿ ವಜಾಗೊಂಡಿದೆ.
ಇನ್ನು ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಫೆ.12ರಂದು ಚಾರ್ಜ್ ಶೀಟ್ ಸಲ್ಲಿಸಲು ನಿರ್ಧರಿಸಿದೆ. ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಪೊಲೀಸರ ಕೈ ಸೇರಿದ್ದು, ತನಿಖೆ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.