ಉಡುಪಿ: ಐಟಿ ಅಧಿಕಾರಿಗಳು ಹಾಗೂ ಪೊಲೀಸರ ಸೋಗಿನಲ್ಲಿ ಬಂದ ನಕಲಿ ಅಧಿಕಾರಿಗಳ ತಂಡವೊಂದು ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಿ ದರೋಡೆಗೆ ಯತ್ನಿಸಿರುವ ಘಟನೆ ಉಡುಪಿ ಜಿಲೆಯ ಬ್ರಹ್ಮಾವರ ತಾಲೂಕಿನ ಮಣೂರಿನಲ್ಲಿ ನಡೆದಿದೆ.
ಉದ್ಯಮಿಯೊಬ್ಬರ ಮನೆಗೆ ಎರಡು ಕಾರುಗಳಲ್ಲಿ ಬಂದ ತಂಡ, ಮನೆಯ ಗೇಟ್ ತೆರೆಯಲು ಯತ್ನಿಸಿದೆ. ಸಾಧ್ಯವಾಗಾದಿದ್ದಾಗ ಕಾಂಪೌಂಡ್ ಹಾರಿ ಅಕ್ರಮವಾಗಿ ಪ್ರವೇಶಿಸಿದ್ದು, ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆಯಲು ಯತ್ನಿಸಿದೆ. ಅದೂ ಕೂಡ ಸಾಧ್ಯವಗದೇ ವಾಪಾಸ್ ಆಗಿದ್ದಾರೆ.
ಈ ಎಲ್ಲಾ ದೃಶ್ಯಗಳು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಗಳನ್ನು ಸಿಸಿಟಿವಿ ಸೆಕ್ಯೂರಿಟಿ ಸಂಸ್ಥೆಯ ಸೈನ್ ಇನ್ ಸೆಕ್ಯೂರಿಟಿ ಗಮನಿಸಿದ್ದು, ತಕ್ಷಣ ಮನೆಯ ಮಾಲಕಿ ಕವಿತಾ ಎಂಬುವವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮಹಿಳೆ ತಕ್ಷಣ ಮನೆಯ ಹೊರ ಬಂದು ನೋಡುವಷ್ಟರಲ್ಲಿ ನಕಲಿ ಅಧಿಕಾರಿಗಳು ಎಸ್ಕೇಪ್ ಆಗಿದ್ದಾರೆ.
ಮನೆ ಮಾಲಕಿ ಕವಿತಾ (34) ಕೋಟ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಜು.25ರಂದು ಬೆಳಿಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು. ಆಗ ನಿರ್ಲಕ್ಷಿಸಿದ್ದು 9 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಎಂಬುವವರು ಕರೆ ಮಾಡಿ, ನಿಮ್ಮ ಮನೆಗೆ ಸ್ಟಿಫ್ಟ್ ಮತ್ತು ಇನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ಕಾಂಪೌಂಡ್ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ತೆಗೆಯಲು ಪ್ರಯತ್ನಿಸಿರುವುದಾಗಿಯೂ ಗೇಟು ತೆರೆಯದಾಗ ವಾಪಾಸು ಹೋಗಿರುವುದಾಗಿ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಆಗಂತುಕರು ವಾಹನದಲ್ಲಿ ಸಫಾರಿ ಧರಿಸಿ ಅಧಿಕಾರಿಯಂತೆ ಕಾಣುವ ಒಬ್ಬ ಮತ್ತು ನಾಲ್ವರು ಹಾಗೂ ಇನ್ನೊಂದು ವಾಹನದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ್ದವರು ಇದ್ದರು. ಆಗಂತುಕರು ಗುರುತು ಮರೆಮಾಚಲು ವೇಷ ಬದಲಿಸಿದಂತೆ ಕಾಣುತ್ತಿದೆ ಎಂದು ದೂರಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಎರಡು ಪ್ರತ್ಯೇಕ ತಂಡ ರಚಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.