ಉಡುಪಿ: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಕ್ಸಲರು ಮತ್ತೆ ಆಕ್ಟೀವ್ ಆಗಿದ್ದು, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೇರಳ ಮೂಲದ ನಕ್ಸಲರು ಉಡುಪಿ, ಚಿಕ್ಕಮಗಳೂರಿನ ಹಲವೆಡೆ ಭೇಟಿ ನೀಡಿದ್ದು, ನಕ್ಸಲ್ ಚಟುವಟಿಕೆ ಮತ್ತೆ ಶುರು ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಐದು ದಿನಗಳ ಕಾಲ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದೆ.
ಉಡುಪಿಯ ಹೆಬ್ರಿ ಮೂಲದ ವಿಕ್ರಂ ಗೌಡ ನೇತೃತ್ವದ ನಕ್ಸಲ್ ತಂಡ ಬೈಂದೂರು ತಾಲೂಕಿನ ಕೊಲ್ಲೂರು, ಮುದ್ದೂರು, ಜಡ್ಕಲ್, ಬೆಳ್ಕಲ್ ಗ್ರಾಮದ ಸುತ್ತಮುತ್ತ ಓಡಾಡಿರುವ ಶಂಕೆ ವ್ಯಕ್ತವಾಗಿದೆ. ವಿಕ್ರಂ ಗೌಡ 20 ವರ್ಷಗಳ ಹಿಂದೆ ನಕ್ಸಲೈಟ್ ಆಗಿದ್ದ. ಕೇರಳದಲ್ಲಿ ತನ್ನ ಚಟುವಟಿಕೆ ನಡೆಸುತ್ತಿದ್ದ. ಆತನ ತಂಡದ ಮೂವರು ಸದಸ್ಯರು ಈಗ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಹಾಗೂ ಪೊಲಿಸರು ಅಲರ್ಟ್ ಆಗಿದ್ದು, ಕೂಂಬಿಂಗ್ ಕಾರ್ಯಾಚರಣೆ ನಡೆಸುವ ಸಾದ್ಯತೆ ಇದೆ.