ದಿನಕ್ಕೊಂದು ತಿರುವು ಪಡೆಯುತ್ತಿದ್ದ ಮಹಾರಾಷ್ಟ್ರ ರಾಜಕಾರಣ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ತಮ್ಮನ್ನು ಅನರ್ಹಗೊಳಿಸಲಾಗುತ್ತದೆ ಮಾಹಿತಿ ತಿಳಿಯುತ್ತಲೆ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, 40ಕ್ಕೂ ಅಧಿಕ ಶಾಸಕರು ಈ ಬಣದಲ್ಲಿರುವುದರಿಂದ ತಮ್ಮದೇ ನಿಜವಾದ ಶಿವಸೇನೆ ಎಂದು ಪ್ರತಿಪಾದಿಸುತ್ತಿದ್ದಾರೆ.
ಬಂಡಾಯ ಶಾಸಕರು ಅಸ್ಸಾಂನ ಗುವಾಹಟಿಯಲ್ಲಿರುವ ಪಂಚತಾರಾ ಹೋಟೆಲ್ ರಾಡಸನ್ ಬ್ಲೂ ನಲ್ಲಿ ಬೀಡುಬಿಟ್ಟು ಅಲ್ಲಿಂದಲೇ ಕಾರ್ಯತಂತ್ರ ಹೆಣೆಯುತ್ತಿದ್ದರೆ ಇತ್ತ ಮಹಾರಾಷ್ಟ್ರದಲ್ಲಿ ಬಂಡಾಯ ಶಾಸಕರ ಕಚೇರಿ ಹಾಗೂ ನಿವಾಸಗಳ ಮುಂದೆ ಶಿವಸೈನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಪತಿ ಸರ್ಕಾರ ಉಳಿಸಲು ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಅಖಾಡಕ್ಕಿಳಿದಿದ್ದಾರೆ.
ಗುವಾಹಾಟಿಯಲ್ಲಿರುವ ಬಂಡಾಯ ಶಾಸಕರ ಪತ್ನಿಯರಿಗೆ ಕರೆ ಮಾಡುತ್ತಿರುವ ರಶ್ಮಿ ಠಾಕ್ರೆ, ಅವರ ಮೂಲಕ ಬಂಡಾಯ ಶಾಸಕರ ಮನವೊಲಿಸುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಕೆಲವರಿಗೆ ಸೂಕ್ತ ಸ್ಥಾನಮಾನ ಕೊಡಿಸುವ ಭರವಸೆಯನ್ನೂ ಸಹ ರಶ್ಮಿ ಠಾಕ್ರೆ ನೀಡುತ್ತಿದ್ದು ಅವರ ಈ ಪ್ರಯತ್ನ ಎಷ್ಟರಮಟ್ಟಿಗೆ ಫಲಪ್ರದವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.