ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮತ್ತೊಂದು ಹಂತ ತಲುಪಿದ್ದು, ಬಂಡಾಯ ಶಾಸಕರ ಸಂಖ್ಯೆ ಏರಿಕೆಯಾಗುತ್ತಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದ್ದು, ಬಂಡಾಯ ಶಾಸಕರಿಗೆ ಶಿವಸೇನೆ ಪಕ್ಷದ ನಾಯಕರು ಮಣಿದಿದ್ದಾರೆ. ಗುವಾಹಟಿಯಲ್ಲಿರುವ ಶಾಸಕರ ಜತೆ ಚರ್ಚೆಗೆ ಸಿದ್ಧವಿದ್ದೇವೆ ಎಂದು ಪಕ್ಷದ ನಾಯಕರ ಸಭೆಯ ನಂತರ ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಶಾಸಕರೊಂದಿಗೆ ನಾವು ಮುಕ್ತವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಮಾತುಕತೆಗೆ ಇನ್ನೂ ಬಾಗಿಲು ತೆರೆದಿದೆ ಎಂದು ಹೇಳಿದ್ದಾರೆ.
ಆದರೆ, ಈಗಾಗಲೇ ಬಂಡಾಯ ಶಾಸಕರು ಬಹುದೂರ ಸಾಗಿದ್ದು, ಅವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಇನ್ನು ಮೈತ್ರಿ ಪಕ್ಷ ಎನ್ಸಿಪಿ ಮಹತ್ವದ ಸಭೆ ನಡೆಸಿದ್ದು, ರಾಜಕೀಯ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ನಾವು ಕೊನೆಯವರೆಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಬೆಂಬಲಿಸುತ್ತೇವೆ. ಅವರ ಜೊತೆಗೆ ನಿಲ್ಲುತ್ತೇವೆ ಎಂದು ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಉದ್ಧವ ಠಾಕ್ರೆಗೆ ನಾವು ಬೆಂಬಲ ಮುಂದುವರಿಸುತ್ತೇವೆ ಎಂದು ಅಜಿತ್ ಪವಾರ್ ತಿಳಿಸಿದ್ದಾರೆ. ಮಹಾ ವಿಕಾಸ ಅಘಾಡಿ ಸರ್ಕಾರ ಐದು ವರ್ಷ ಪೂರೈಸಲಿದೆ. ಸಿಎಂ ಠಾಕ್ರೆ ಅವರಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವುದಿಲ್ಲ. ಮಹಾ ವಿಕಾಸ್ ಅಘಾಡಿ ಸರ್ಕಾರ ಇರುವವರೆಗೂ ಬೆಂಬಲ ಮುಂದುವರೆಸುತ್ತೇವೆ. ಶಿವಸೇನೆ ಪಕ್ಷದ ಶಾಸಕರ ಬಂಡಾಯ ವಿಚಾರ ಅವರ ಪಕ್ಷದ ಆಂತರಿಕ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.