
ಆದರೆ, ಇಲ್ಲೊಬ್ಬ ಪರಿಸರ ಪ್ರೇಮಿ ಬೃಹತ್ತಾಗಿ ಬೆಳೆದು ನಿಂತಿರುವ ಮಾವಿನ ಮರಕ್ಕೆ ಯಾವುದೇ ರೀತಿಯ ಧಕ್ಕೆ ಬಾರದ ರೀತಿಯಲ್ಲಿ ಆ ಮರವನ್ನೂ ಸೇರಿಸಿ ಬಹುಮಹಡಿಯ ಮನೆಯನ್ನು ಕಟ್ಟಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉದಯಪುರದ ಚಿತ್ರಕೂಟದಲ್ಲಿ ಕುಲ್ ಪ್ರದೀಪ್ ಸಿಂಗ್ ಮರದ ಮನೆಯನ್ನು ನಿರ್ಮಾಣ ಮಾಡಿರುವ ಪರಿಸರ ಪ್ರೇಮಿ. ಇದೀಗ ಎಲ್ಲರನ್ನೂ ಸೆಳೆಯುತ್ತಿರುವ ಈ ಮನೆ ಒಂದು ಪ್ರವಾಸಿತಾಣವಾಗಿ ಪರಿಣಮಿಸಿದೆ.
ಅಂದ ಹಾಗೆ ಕೆಪಿ ಸಿಂಗ್ ಮಾಡಿರುವುದಾದರೂ ಏನು? ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಸಿಂಗ್ ತಮ್ಮ ನಿವೇಶನದಲ್ಲಿದ್ದ 80 ವರ್ಷದ ಮಾವಿನ ಮರವನ್ನು ಹಾಗೆಯೇ ಉಳಿಸಿಕೊಂಡು 2000 ರಲ್ಲಿ ಮನೆ ನಿರ್ಮಾಣ ಮಾಡಿದ್ದರು. ಮರದ ಕೊಂಬೆಗಳನ್ನು ಸೇರಿಸಿ ನಾಲ್ಕು ಮಹಡಿಗಳ ಮನೆಯನ್ನು ನಿರ್ಮಿಸಿದ್ದಾರೆ.
ಮರದ ಕೊಂಬೆಗಳಲ್ಲಿ ಕೆಲವನ್ನು ಸೋಫಾ ರೀತಿಯಾಗಿ ಬಳಸುತ್ತಿದ್ದರೆ, ಮತ್ತೆ ಕೆಲವನ್ನು ಟಿವಿ ಸ್ಟಾಂಡ್ ರೀತಿಯಲ್ಲಿ ಮಾರ್ಪಡಿಸಿದ್ದಾರೆ. ಇದರ ಮತ್ತೊಂದು ವಿಶೇಷವೆಂದರೆ ಮರದ ಸುತ್ತಲೂ ಮನೆಯನ್ನು ನಿರ್ಮಿಸಿರುವುದು. ಇಲ್ಲಿ ಅಡುಗೆ ಮನೆ, ಬೆಡ್ ರೂಂ, ಬಾತ್ ರೂಂ, ಡೈನಿಂಗ್ ಹಾಲ್ ಮತ್ತು ಲೈಬ್ರರಿಯನ್ನು ಕಟ್ಟಲಾಗಿದೆ. ಮರದ ಕೊಂಬೆಗಳು ಕಿಚನ್ ಮತ್ತು ಬೆಡ್ ರೂಂನ ಗೋಡೆಗಳಿಂದ ಹೊರಗೆ ಬಂದಿದ್ದು, ಇವುಗಳಿಂದ ಮಾವಿನ ಹಣ್ಣು ದೊರೆಯುತ್ತಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ.ಪಿ. ಸಿಂಗ್, ಈ ಪ್ರದೇಶದಲ್ಲಿ ಜನರು ಹಣ್ಣಿನ ಮರಗಳನ್ನು ಬೆಳೆಸುತ್ತಿದ್ದರು. ಆದರೆ, ಕಾಲಕ್ರಮೇಣ ಈ ಭಾಗದಲ್ಲಿದ್ದ ಸುಮಾರು 4 ಸಾವಿರ ಮರಗಳನ್ನು ಕತ್ತರಿಸಲಾಯಿತು. ಇದರಿಂದ ನನಗೆ ನೋವಾಯಿತು. ಆಗ ನಾನು ಮರವನ್ನು ಕತ್ತರಿಸದೇ ಮನೆ ನಿರ್ಮಾಣ ಮಾಡಲು ಸಾಧ್ಯವೇ ಎಂದು ವಿಚಾರಿಸಿದಾಗ ಅದಕ್ಕೆ `ಇಲ್ಲ’ ಎಂಬ ಉತ್ತರ ಬಂತು. ಆದರೆ, ನಾನು ಮರವನ್ನು ಕತ್ತರಿಸದೇ ಮನೆ ನಿರ್ಮಾಣ ಮಾಡಲು ಸಂಕಲ್ಪ ಮಾಡಿ ಅದರಂತೆ ಮನೆಯನ್ನು ನಿರ್ಮಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಈಗಾಗಲೇ ಈ `ಮರದ ಮನೆ’ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರಿದ್ದು, ಗಿನ್ನಿಸ್ ವಿಶ್ವ ದಾಖಲೆಗೆ ಸೇರಿಸುವ ಪ್ರಯತ್ನದಲ್ಲಿ ಕೆಪಿ ಸಿಂಗ್ ಇದ್ದಾರೆ.