ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕೊಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ನೂಪುರ್ ಶರ್ಮಾ ಇತ್ತೀಚೆಗೆ ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ವಿರುದ್ಧ ದೇಶದ ಹಲವೆಡೆ ಭಾರೀ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿತ್ತು. ಉದಯಪುರ ಮಾಲ್ಡಾಸ್ ಸ್ಟ್ರೀಟ್ ಪ್ರದೇಶದ ಧನ್ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟೈಲರಿಂಗ್ ಅಂಗಡಿ ನಡೆಸುತ್ತಿದ್ದ ಕನ್ಹಯ್ಯಾ ಲಾಲ್ ಅವರು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.
ಇಂದು ಮಧ್ಯಾಹ್ನ ಆತನ ಅಂಗಡಿಗೆ ಬಂದ ಹಂತಕರು ಶಿರಚ್ಛೇದ ಮಾಡಿ ಹತ್ಯೆಗೈದಿದ್ದಾರೆ. ಘಟನೆಯ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಜೀವ ತೆಗೆಯುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ಘಟನೆ ಬೆನ್ನಲ್ಲೇ ಉದ್ವಿಗ್ನ ಸ್ಥಿತಿ ಉಂಟಾಗಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ರಾಜ್ ಸಮಂದ್ ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಭೀಕರ ಹತ್ಯೆ ಪ್ರಕರಣದ ಹಿಂದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಫೇಸ್ ಬುಕ್ ಪೋಸ್ಟ್ ಮಾಡಿದ್ದಕ್ಕಾಗಿ ಆರೋಪಿಗಳು ಕನ್ಹಯ್ಯಾ ಲಾಲ್ ಎಂಬ ವ್ಯಕ್ತಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಅವರ ಕತ್ತು ಸೀಳಿದ್ದರು. ಕೃತ್ಯವೆಸಗಿದ್ದ ರಿಯಾಜ್ ಮತ್ತು ಮೊಹಮ್ಮದ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.