ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯಾಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳ ಮೇಲೆ ಕೋರ್ಟ್ ಆವರಣದಲ್ಲಿ ಥಳಿಸಲಾಗಿದೆ.
ಪೊಲೀಸರು ಎನ್ಐಎ ಕೋರ್ಟ್ ಗೆ ಕರೆದುಕೊಂಡಿದ್ದ ಸಂದರ್ಭದಲ್ಲಿ ನೆರೆದಿದ್ದ ಸಾರ್ವಜನಿಕರು ಆರೋಪಿಗಳ ಮೇಲೆ ಮುಗಿಬಿದ್ದು ಥಳಿಸಿದ್ದಾರೆ. ನೂರಾರು ಜನರು ನ್ಯಾಯಾಲಯದ ಆವರಣದಲ್ಲಿ ಸೇರಿದ್ದು, ಕೆಲವರು ಹಲ್ಲೆ ಮಾಡಿದ್ದಾರೆ.
ಪೊಲೀಸ್ ವ್ಯಾನ್ ಗೆ ಹತ್ತಿಸಲು ಕರೆ ತರುವಾಗ ಆರೋಪಿಗಳನ್ನು ಎಳೆದಾಡಿದ ಸಾರ್ವಜನಿಕರ ಗುಂಪು ಹಲ್ಲೆ ಮಾಡಿದೆ. ಹರಸಾಹಸಪಟ್ಟು ಪೊಲೀಸರು ಆರೋಪಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ. ಪೊಲೀಸರ ಸಕಾಲಿಕ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ.
ಉದಯ್ ಪುರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ನಾಲ್ವರು ಆರೋಪಿಗಳ ಮೇಲೆ ಇಂದು ರಾಜಸ್ಥಾನದ ಜೈಪುರದಲ್ಲಿ ಕೋಪಗೊಂಡ ಗುಂಪೊಂದು ಹಲ್ಲೆ ನಡೆಸಿದೆ. ಬಹುಮಟ್ಟಿಗೆ ವಕೀಲರನ್ನು ಒಳಗೊಂಡ ಗುಂಪು, ಉದಯಪುರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಕಪಾಳಮೋಕ್ಷ ಮಾಡಿ ಥಳಿಸಿದೆ. ಆರೋಪಿಗಳ ಬೆಂಗಾವಲು ಪಡೆ ಪೊಲೀಸರು ಅವರನ್ನು ಪೊಲೀಸ್ ವ್ಯಾನ್ ಒಳಗೆ ಕಳಿಸಿದ್ದಾರೆ.
ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಜೈಪುರದ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇಬ್ಬರು ಪ್ರಮುಖ ಆರೋಪಿಗಳಾದ ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಅವರನ್ನು ಬಿಗಿ ಭದ್ರತೆಯ ನಡುವೆ ಅಜ್ಮೀರ್ ಜೈಲಿನಿಂದ ಜೈಪುರಕ್ಕೆ ಕರೆತರಲಾಗಿತ್ತು.