ಮಾನ್ಸೂನ್ ಅವಧಿಯಲ್ಲಿ ಭೇಟಿ ನೀಡಲೇಬೇಕಾದ ತಾಣಗಳಲ್ಲಿ ರಾಜಸ್ಥಾನದ ಉದಯಪುರವೂ ಒಂದು. ಇದು ಸರೋವರಗಳ ನಗರ. ರಾಜಸ್ಥಾನದ ಕಾಶ್ಮೀರ ಎಂದೇ ಈ ನಗರವನ್ನು ಕರೆಯಲಾಗುತ್ತದೆ. ಇದು ಹಸಿರು ಊರು. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ.
ನಗರದ ಶ್ರೀಮಂತ ಸಂಸ್ಕೃತಿ, ಸರೋವರ ಮಧ್ಯದಲ್ಲಿ ಕಲಾತ್ಮಕ ಮತ್ತು ಸುಂದರ ಭವನ ಮತ್ತು ಉದ್ಯಾನಗಳು ನಿಮ್ಮ ಗಮನ ಸೆಳೆಯುತ್ತವೆ. ಇಲ್ಲಿನ ದೋಣಿ ವಿಹಾರ ಮನಸ್ಸಿಗೆ ಮುದ ನೀಡುತ್ತದೆ. ಜಲಮಹಲ್, ಲೇಕ್ ಪ್ಯಾಲೆಸ್, ಫತೇಹ್ ಸರೋವರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ವಿದೇಶಿ ಪ್ರವಾಸಿಗರ ನೆಚ್ಚಿನ ತಾಣ ಇದು. ಸುತ್ತಮುತ್ತಲಿನ ಎಲ್ಲಾ ಭಾಗಗಳಿಂದಲೂ ಈ ನಗರಕ್ಕೆ ಉತ್ತಮ ರಸ್ತೆ ಮತ್ತು ರೈಲು ಸಂಚಾರದ ವ್ಯವಸ್ಥೆಯಿದೆ.
ರಾಜಮಹಲ್, ಸಹೇಲಿಯೋಂಕಿ ಬಾಗ್, ಭಾರತೀಯ ಜಾನಪದ ಕಲಾ ಸಂಗ್ರಹ, ಸಿಟಿ ಪ್ಯಾಲೆಸ್ ಮೊದಲಾದ ಸ್ಥಳಗಳು ಉದಯಪುರದಲ್ಲಿವೆ. ಆಸುಪಾಸಿನ ನಾಥದ್ವಾರ, ಶಿಲ್ಪಗ್ರಾಮ, ಕಾಂಕರೋಲಿ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿವೆ. ಕರಕುಶಲ ವಸ್ತುಗಳೊಂದಿಗೆ, ಮರದ ಆಟಿಕೆಗಳು, ಲೋಹದ ವಿಗ್ರಹಗಳು ಮತ್ತು ಪಾದರಕ್ಷೆ ಖರೀದಿಗೆ ಇದು ಹೇಳಿ ಮಾಡಿಸಿದ ತಾಣ.