
ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಹಳೆದ್ವೇಷದ ಹಿನ್ನಲೆಯಲ್ಲಿ ಗರ್ಭಿಣಿ ಪತ್ನಿ ಎದುರಲ್ಲೇ 27 ವರ್ಷದ ವ್ಯಕ್ತಿಯನ್ನು ಕತ್ತಿ, ದೊಣ್ಣೆಗಳಿಂದ ಥಳಿಸಿ ಹತ್ಯೆ ಮಾಡಲಾಗಿದೆ.
ಮೃತ ವ್ಯಕ್ತಿಯನ್ನು ಮೊಹಮ್ಮದ್ ಘಿಜಾಲಿ ಎಂದು ಪೊಲೀಸರು ಗುರುತಿಸಿದ್ದಾರೆ., ಘಿಜಾಲಿ ಪೋಷಕರ ಮನೆಯಲ್ಲಿದ್ದ ತನ್ನ ಹೆಂಡತಿಯನ್ನು ಭೇಟಿ ಮಾಡಲು ಸಜ್ಜನ್ ನಗರಕ್ಕೆ ತೆರಳಿದ್ದ ವೇಳೆ ಹತ್ಯೆ ಮಾಡಲಾಗಿದೆ. ಪ್ರಮುಖ ಆರೋಪಿ ಸದ್ದಾಂ ಪತ್ನಿಯ ನಿವಾಸದಲ್ಲಿದ್ದ ಘಿಜಾಲಿಯನ್ನು ಹೊರಗೆ ಕರೆತಂದು ಕೊಲೆ ಮಾಡಿದ್ದಾನೆ ಎಂದು ಅಂಬಾಮಟಾ ಪೊಲೀಸ್ ಠಾಣೆ ಎಸ್.ಹೆಚ್.ಒ. ಸುನೀಲ್ ಕುಮಾರ್ ಟೈಲರ್ ತಿಳಿಸಿದ್ದಾರೆ.
ಸದ್ದಾಂ ಸುಮಾರು 5-6 ಜನರೊಂದಿಗೆ ಘಿಜಾಲಿ ಮೇಲೆ ಕತ್ತಿ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾನೆ. ದಾಳಿಯ ನಂತರ ಘಿಜಾಲಿ ತೀವ್ರವಾಗಿ ಗಾಯಗೊಂಡಿದ್ದು, ಆತನ ಸಹಾಯಕ್ಕೆ ಪತ್ನಿ ಓಡಿಬಂದಾಗ ಆಕೆಗೂ ಥಳಿಸಿದ್ದಾರೆ. ಘಿಝಾಲಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಆ ವೇಳೆಗಾಗಲೇ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ನೀಡಲಾಯಿತು.
ಘಿಜಾಲಿ ಮತ್ತು ಸದ್ದಾಂ ಇಬ್ಬರೂ ಕ್ರಿಮಿನಲ್ ಇತಿಹಾಸ ಹೊಂದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.