ಡೆಹ್ರಾಡೂನ್: ದೇಶದಲ್ಲಿಯೇ ಮೊದಲ ಬಾರಿಗೆ ಇಂದಿನಿಂದ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ. ಇನ್ನು ವಿವಾಹ, ವಿಚ್ಛೇದನ, ಆಸ್ತಿಗೆ ಎಲ್ಲಾ ಧರ್ಮಿಯರಿಗೂ ಒಂದೇ ಕಾಯ್ದೆ ಅನ್ವಯವಾಗಲಿದೆ.
ಎಲ್ಲಾ ಧರ್ಮದವರಿಗೆ ಸಂಹಿತೆಯ ಅನ್ವಯ ಸರ್ಕಾರದಲ್ಲಿ ವಿವಾಹ ನೋಂದಣಿ ಕಡ್ಡಾಯವಾಗಿರುತ್ತದೆ. ಆಯಾ ಧರ್ಮದ ಅನುಸಾರ ಬೇರೆ ಬೇರೆ ವಿವಾಹ ನೋಂದಣಿ ಇನ್ನು ಇರುವುದಿಲ್ಲ. ಎಲ್ಲಾ ಧರ್ಮೀಯರಿಗೂ ವಿಚ್ಛೇದನ, ಆಸ್ತಿಗೆ ಒಂದೇ ಕಾನೂನು ಜಾರಿಯಲ್ಲಿರುತ್ತದೆ. ಮದುವೆಯ ರೀತಿಯಲ್ಲಿ ಲಿವ್ ಇನ್ ಸಂಬಂಧಕ್ಕೂ ನೋಂದಣಿ ಕಡ್ಡಾಯವಾಗಿರುತ್ತದೆ. ಇದು ಉತ್ತರಾಖಂಡ ರಾಜ್ಯದ ನಿವಾಸಿಗಳಿಗೆ ಅನ್ವಯವಾಗಿರುತ್ತದೆ. ಅನ್ಯ ರಾಜ್ಯಗಳಲ್ಲಿರುವ ಉತ್ತರಾಖಂಡ ಮೂಲದವರಿಗೂ ಅನ್ವಯವಾಗಲಿದೆ. ಮಗು ಜನಿಸಿದಲ್ಲಿ 7 ದಿನದೊಳಗೆ ನೋಂದಣಿ ಕಡ್ಡಾಯವಾಗಿದೆ.
ಉಯಿಲು ಬರಹಗಾರರು ಸರ್ಕಾರಕ್ಕೆ ತಮ್ಮ ಆಧಾರ್ ಸಂಖ್ಯೆಯ ಮಾಹಿತಿ ನೀಡಬೇಕಿದೆ. ಎರಡು ಸಾಕ್ಷಿಗಳು ಉಯಿಲು ಪತ್ರವನ್ನು ಓದುವ ವಿಡಿಯೋ ಚಿತ್ರೀಕರಣ ಮಾಡುವುದು ಕಡ್ಡಾಯವಾಗಿರುತ್ತದೆ.
ಇಂದು ಮಧ್ಯಾಹ್ನ 12:30ಕ್ಕೆ ಯುಸಿಸಿ ವೆಬ್ಸೈಟ್ ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಾಲನೆ ನೀಡಲಿದ್ದಾರೆ. ಕೇಂದ್ರ ಆಡಳಿತಾರೂಢ ಬಿಜೆಪಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಯುಸಿಸಿ ಕಾಯ್ದೆಯನ್ನು ಬಿಜೆಪಿ ಆಡಳಿತದ ರಾಜ್ಯವಾದ ಉತ್ತರಾಖಂಡದಲ್ಲಿ ಮೊದಲ ಬಾರಿಗೆ ಜಾರಿ ಮಾಡಲಾಗುತ್ತಿದೆ. ಸ್ವಾತಂತ್ರ್ಯ ನಂತರದಲ್ಲಿ ರಾಜ್ಯವೊಂದು ಇಂತಹ ಕಾಯ್ದೆಯನ್ನು ಜಾರಿಗೊಳಿಸುತ್ತಿರುವುದು ಇದೇ ಮೊದಲಾಗಿದೆ.