ಬೆಂಗಳೂರು: ಸರ್ಕಾರದಿಂದಲೇ ಓಲಾ, ಉಬರ್ ರೀತಿ ಆಪ್ ರಚಿಸಿ ವರ್ಷಾಂತ್ಯದೊಳಗೆ ಸೇವೆ ಆರಂಭಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಆಪ್ ಆಧಾರಿತ ಸಾರಿಗೆ ಸೇವೆ ನೀಡುವ ಸಂಸ್ಥೆಗಳಿಂದ ಆಟೋ, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಲು ಜನರಿಗೆ ಕಡಿಮೆ ದರದಲ್ಲಿ ಉತ್ತಮ ಸಾರಿಗೆ ಸೇವೆ ಕಲ್ಪಿಸಲು ಸರ್ಕಾರದಿಂದಲೇ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಪ್ ಆಧಾರಿತ ಸೇವೆ ಆರಂಭಿಸಲು ತೀರ್ಮಾನಿಸಲಾಗಿದೆ.
ಆಟೋ ಮತ್ತು ಟ್ಯಾಕ್ಸಿ ಚಾಲಕರನ್ನು ಆಪ್ ಆಧಾರಿತ ಸಾರಿಗೆ ಸೇವೆ ನೀಡುವ ಸಂಸ್ಥೆಗಳು ಶೋಷಣೆ ಮಾಡುತ್ತಿದ್ದು, ಇದಕ್ಕೆ ಪರಿಹಾರ ಹುಡುಕಲು ಸಂಘಟನೆಗಳು ಮನವಿ ಮಾಡಿದ್ದವು. ಅದು ಕಾರ್ಯರೂಪಕ್ಕೆ ಬರುತ್ತಿದ್ದು, ಶೀಘ್ರವೇ ಆಪ್ ಅಭಿವೃದ್ಧಿಪಡಿಸಲಾಗುವುದು. ವರ್ಷಾಂತ್ಯದೊಳಗೆ ಸೇವೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಓಲಾ, ಉಬರ್ ಮಾದರಿಯಲ್ಲೇ ಸರ್ಕಾರದ ಆಪ್ ಸಿದ್ಧಪಡಿಸಲಿದ್ದು, ಈ ಅಪ್ಲಿಕೇಶನ್ ಗೆ ಟ್ಯಾಕ್ಸಿ, ಕ್ಯಾಬ್ ಚಾಲಕರು ನೋಂದಣಿ ಮಾಡಿಕೊಳ್ಳಬೇಕಿದೆ. ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಬುಕ್ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.