ಫೇಸ್ಬುಕ್‌ನಲ್ಲಿ ಕಿರಣ್ ವರ್ಮಾ ಎಂಬವರು ಎಪ್ರಿಲ್ 3ರಂದು ಊಬರ್ ಚಾಲಕನ ಜೊತೆಗಿನ ತಮ್ಮ ಹೃದಯಸ್ಪರ್ಶಿ ಮುಖಾಮುಖಿಯನ್ನು ಹಂಚಿಕೊಂಡಿದ್ದಾರೆ. ಕ್ಯಾಬ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನಿಗೆ ಮೇಲಿಂದ ಮೇಲೆ ಫೋನ್ ಕರೆಗಳು ಬರುತ್ತಲೇ ಇತ್ತು. ಕರೆ ಮಾಡಿದ ಮಗಳು ತನಗೆ ಹೊಸ ಸ್ಕೂಲ್ ಬ್ಯಾಗ್ ತರುವಂತೆ ತಂದೆಯ ಬಳಿ ಕೇಳುತ್ತಿದ್ಲು.
ಆದರೆ ಆತನ ಬಳಿ ಹಣವಿರಲಿಲ್ಲ. ಹಾಗಾಗಿಯೇ ಮಗಳ ಫೋನ್ ಕಾಲ್ ರಿಸೀವ್ ಮಾಡದೇ ನಿರ್ಲಕ್ಷಿಸಲು ಚಾಲಕ ಪ್ರಯತ್ನಿಸುತ್ತಿದ್ದ. ನಂತರ ಚಾಲಕ ಫೋನ್‌ನಲ್ಲಿ ಪತ್ನಿಯ ಬಳಿ ತನ್ನ ಅಳಲು ತೋಡಿಕೊಂಡಿದ್ದಾನೆ. “ನಾನು ಸ್ವಲ್ಪ ಹಣವನ್ನು ಉಳಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಮುಂದಿನ 2-3 ದಿನಗಳಲ್ಲಿ ಹೊಸ ಬ್ಯಾಗ್ ಖರೀದಿಸಲು ಸಾಧ್ಯವಿಲ್ಲ, ಈಗಾಗ್ಲೇ ಮಗಳಿಗೆ ಪುಸ್ತಕಗಳನ್ನು ಖರೀದಿಸಿದೆ ಮತ್ತು ಮಾಸಿಕ ಬಿಲ್‌ಗಳನ್ನು ಪಾವತಿಸಬೇಕಾಗಿದೆ.”ಎಂದು ಹೇಳಿದ.
ಈ ಸಂಭಾಷಣೆಯನ್ನು ಆಲಿಸಿದ ಕಿರಣ್, ತಂದೆಯಾಗಿ ಊಬರ್ ಚಾಲಕ ನಡೆಸುತ್ತಿರುವ ಹೋರಾಟವನ್ನು ಅರ್ಥಮಾಡಿಕೊಂಡರು. ಅಷ್ಟೇ ಅಲ್ಲ ಆತನಿಗೊಂದು ಸರ್ಪೈಸ್ ನೀಡಬೇಕೆಂಬ ಪ್ಲಾನ್ ಕೂಡ ಸಿದ್ಧವಾಯ್ತು. ಡ್ರಾಪ್ ಸ್ಥಳವನ್ನು ಬದಲಾಯಿಸಲು ಚಾಲಕನಿಗೆ ಸೂಚಿಸಿದ ಕಿರಣ್, ಆತನನ್ನು ನೇರವಾಗಿ ಅಂಗಡಿಗೆ ಕರೆದೊಯ್ದು ಸ್ಕೂಲ್ ಬ್ಯಾಗ್ ಕೊಡಿಸಿದ್ದಾರೆ. ಕಿರಣ್ ವರ್ಮಾ ಅವರ ಔದಾರ್ಯಕ್ಕೆ ಮರುಳಾದ ಚಾಲಕ ಅನಿರೀಕ್ಷಿತ ಉಡುಗೊರೆ ಸಿಕ್ಕಿದ್ದರಿಂದ ಮೂಕವಿಸ್ಮಿತನಾಗಿದ್ದರು.
ಕಿರಣ್ ವರ್ಮಾರ ಫೋನ್ ನಂಬರ್ ಪಡೆದ ಚಾಲಕ, ಹೊಸ ಸ್ಕೂಲ್ ಬ್ಯಾಗ್‌ನೊಂದಿಗೆ ಇರುವ ಮಗಳ ಫೋಟೋವನ್ನು ಕಳಿಸಿಕೊಟ್ಟಿದ್ದಾರೆ. “ಫೋಟೋದಲ್ಲಿ ಬಾಲಕಿ ದೇವತೆಯಂತೆ ನಗುತ್ತಿದ್ದಳು. ಇದು ಹಣ ಕೊಟ್ಟು ಖರೀದಿಸಿದ ಚಿತ್ರಕ್ಕಿಂತಲೂ ಹೆಚ್ಚು ಮೌಲ್ಯಯುತವಾಗಿದೆ” ಎಂದು ಕಿರಣ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ತಮ್ಮ ಅಕೌಂಟ್‌ನಲ್ಲಿ ಸಾಕಷ್ಟು ಹಣವಿಲ್ಲದೇ ಇದ್ದಿದ್ದರಿಂದ ಹೆಂಡತಿಯ ಖಾತೆಯಿಂದ ಪಾವತಿಸಿ ಬ್ಯಾಗ್ ಖರೀದಿಸಿದ್ದಾರೆ ಕಿರಣ್ ವರ್ಮಾ. ಹಣವನ್ನು ಖರ್ಚು ಮಾಡಿದ್ದಕ್ಕಾಗಿ ಪತ್ನಿ ತಮ್ಮ ಮೇಲೆ ಕೋಪಗೊಳ್ಳುವುದಿಲ್ಲವೆಂದು ಖಾತ್ರಿಯಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ದಯೆಯಿಂದಿರಿ ಮತ್ತು ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡಿ, ಜಗತ್ತು ಸುಂದರವಾಗಿ ಕಾಣುತ್ತದೆ ಎಂಬುದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಕಿರಣ್ ನೀಡಿರುವ ಸಂದೇಶ. ಕಿರಣ್ ಮಾನವೀಯತೆಗೆ ನೆಟ್ಟಿಗರಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.