Uber ಭಾರತದಲ್ಲಿ ಕ್ಯಾಬ್ ಸೇವೆ ನೀಡುತ್ತಿರುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಆದರೆ ಪೀಕ್ ಸಮಯದಲ್ಲಿ ದರಗಳು ಸಾಮಾನ್ಯಕ್ಕಿಂತಲೂ ಹೆಚ್ಚಾಗಿರುತ್ತವೆ ಜೊತೆಗೆ ಕ್ಯಾಬ್ ರೈಡ್ ಅನ್ನು ಬುಕ್ ಮಾಡುವುದು ಕಷ್ಟಕರವಾಗಿರುತ್ತದೆ.
ಹಾಗಾಗಿ ಈ ಪ್ಲಾಟ್‌ಫಾರ್ಮ್ ತನ್ನ ಉಬರ್ ರಿಸರ್ವ್ ವೈಶಿಷ್ಟ್ಯವನ್ನು ನವೀಕರಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾದ ಈ ಫೀಚರ್, ಗ್ರಾಹಕರಿಗೆ 30 ದಿನ ಮುಂಚಿತವಾಗಿ ರೈಡ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲು ಅವಕಾಶ ಮಾಡಿಕೊಟ್ಟಿತು.
ಆದರೆ Uber ಈಗ ಬಳಕೆದಾರರಿಗೆ 90 ದಿನಗಳ ಮೊದಲೇ ರೈಡ್‌ಗಳನ್ನು ಬುಕ್ ಮಾಡಲು ಅನುಮತಿಸುತ್ತದೆ. ಕಂಪನಿಯು ಇತ್ತೀಚಿನ ಬ್ಲಾಗ್ ಪೋಸ್ಟ್ ಮೂಲಕ ಈ ಬದಲಾವಣೆಯನ್ನು ಘೋಷಿಸಿದೆ. 90 ದಿನಗಳ ಮೊದಲೇ ಕ್ಯಾಬ್ ಬುಕ್ಕಿಂಗ್ ಮಾಡಬಹುದು ಮತ್ತು ಅದೇ ಸಮಯದಲ್ಲಿ ಬೆಲೆ ಮತ್ತು ಚಾಲಕನ ವಿವರಗಳು ಕೂಡ ಲಭ್ಯವಾಗಲಿವೆ. Uber ರಿಸರ್ವ್ ಫೀಚರ್ ವಿಸ್ತರಣೆಯು ಅಮೆರಿಕ ಮತ್ತು ಕೆನಡಾದಲ್ಲಿ ಮುಂಬರುವ ಪ್ರವಾಸಿ ಋತುವಿಗಾಗಿ ಬಿಡುಗಡೆ ಮಾಡಿದ ನಾಲ್ಕು ಹೊಸ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
ವಿಮಾನ ನಿಲ್ದಾಣಗಳಲ್ಲಿ ಒತ್ತಡ ರಹಿತ ಪ್ರಯಾಣವನ್ನು ಸುಲಭಗೊಳಿಸುವುದು ಉಬರ್‌ನ ಗುರಿಯಾಗಿದೆ. ಆದ್ದರಿಂದ, ಸ್ಯಾನ್ ಫ್ರಾನ್ಸಿಸ್ಕೋ-ಪ್ರಧಾನ ಕಛೇರಿಯ ಸಂಸ್ಥೆಯು ಗೇಟ್‌ನಿಂದ ಉಬರ್ ಪಿಕಪ್ ಪ್ರದೇಶಕ್ಕೆ ಮಾರ್ಗದರ್ಶನ ನೀಡಲು ಹಂತ-ಹಂತದ ನಿರ್ದೇಶನಗಳನ್ನು ಅಪ್ಲಿಕೇಶನ್‌ನಲ್ಲಿ ಪರಿಚಯಿಸಿದೆ. ಈ ವೈಶಿಷ್ಟ್ಯವು ಬಿಡುವಿಲ್ಲದ ಟರ್ಮಿನಲ್ ಮೂಲಕ ನ್ಯಾವಿಗೇಟ್ ಮಾಡಲು ಪ್ರಯಾಣಿಕರಿಗೆ ಸಹಕರಿಸಲಿದೆ.
ಪಿಕಪ್ ಫೀಚರ್‌ಗೆ ನಿರ್ದೇಶನಗಳ ಜೊತೆಗೆ, ಗೇಟ್‌ನಿಂದ ಬ್ಯಾಗೇಜ್ ಕ್ಲೈಮ್‌ಗೆ ಹೋಗಲು ತೆಗೆದುಕೊಳ್ಳುವ ಸಮಯವನ್ನು ಅಂದಾಜು ಮಾಡಲು Uber 400ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ವಾಕಿಂಗ್ ETA ಗಳನ್ನು ಶೀಘ್ರದಲ್ಲೇ ಒದಗಿಸಲಿದೆ. ಶೀಘ್ರದಲ್ಲೇ ಪ್ರಪಂಚದಾದ್ಯಂತ 400ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಈ ಫೀಚರ್‌ಗಳು ಪ್ರಸ್ತುತ ಅಮೆರಿಕ ಮತ್ತು ಕೆನಡಾದ ಬಳಕೆದಾರರಿಗೆ ಮಾತ್ರ ಲಭ್ಯವಿವೆ. ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ ಈ ಮೂರು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಪಿಕಪ್ ಫೀಚರ್‌ಗೆ ನಿರ್ದೇಶನಗಳು ಲಭ್ಯವಿರುತ್ತವೆ.