ಹೈದರಾಬಾದ್: ಎಸ್ಐ ಆಗಬೇಕೆಂದು ಕನಸು ಕಂಡಿದ್ದ ವ್ಯಕ್ತಿ, ಅದನ್ನು ನನಸೂ ಮಾಡಿಕೊಂಡಿದ್ದರು. ಇನ್ನೇನು ಜೀವನ ಸೆಟಲ್ ಆಯಿತು, ಮದುವೆಯಾಗಿ ನೆಮ್ಮದಿಯಿಂದ ಬದುಕು ಸಾಗಿಸೋಣ ಎಂದುಕೊಂಡಿದ್ದ ಅವರ ಕನಸು ಮಾತ್ರ ಜವರಾಯನಿಂದಾಗಿ ನನಸಾಗಲಿಲ್ಲ.
ಹೌದು ! ಒಂದು ವಾರದ ಹಿಂದೆ ಮದುವೆಯಾಗಿದ್ದ ಸಬ್ ಇನ್ಸ್ ಪೆಕ್ಟರ್ ಒಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಅಪಘಾತದಲ್ಲಿ ಅವರ ತಂದೆಯೂ ಇಹಲೋಕ ತ್ಯಜಿಸಿದ್ದಾರೆ.
ಈ ಘಟನೆ ಹೈದರಾಬಾದ್ ಸಮೀಪದ ಚಿಂತಪಲ್ಲಿ ಮಂಡಲದ ಹತ್ತಿರ ನಡೆದಿದೆ. ಎಸ್ಐ ಹಾಗೂ ಅವರ ತಂದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ದೇವರಕೊಂಡಕ್ಕೆ ಆಟೋವೊಂದರಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಆಟೋಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಎಸ್ಐ ಹಾಗೂ ಅವರ ತಂದೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಎಸ್ಐ ಶ್ರೀನು ನಾಯಕ್ ಹೀಗೆ ಅಪಘಾತದಲ್ಲಿ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದ್ದು, ಅವರು ವಿಕರಾಬಾದ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ವಾರವಷ್ಟೇ ಅವರ ವಿವಾಹವಾಗಿತ್ತು.
ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಎಸ್ಐ ರಂಗಾರೆಡ್ಡಿ ಜಿಲ್ಲೆಯ ಮಡ್ಗುಲ ಮಂಡಲದ ಮಾನ್ಯಾ ತಾಂಡಾದ ನಿವಾಸಿಯಾಗಿದ್ದರು. ಇಡೀ ತಾಂಡಾದಲ್ಲಿ ಈಗ ಸೂತಕದ ವಾತಾವರಣ ಆವರಿಸಿದೆ.