ಮಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರ್ ಬೆನ್ನಟ್ಟಿದ ಅಪರಿಚಿತ ಕೆಲವೇ ಕ್ಷಣದಲ್ಲಿ ಪರಾರಿಯಾಗಿದ್ದಾನೆ. ಯು.ಟಿ. ಖಾದರ್ ಮೇಲೆ ದಾಳಿಗೆ ಸಂಚು ನಡೆಸಿರುವ ಶಂಕೆ ವ್ಯಕ್ತವಾಗಿದೆ.
ನಿನ್ನೆ ಯು.ಟಿ. ಖಾದರ್ ಉಳ್ಳಾಲದಿಂದ ಮಂಗಳೂರು ಏರ್ಪೋರ್ಟ್ ಕಡೆಗೆ ಎಸ್ಕಾರ್ಟ್ ನೊಂದಿಗೆ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಮತ್ತೊಂದು ಎಸ್ಕಾರ್ಟ್ ಹಿಂಬಾಲಿಸಿದೆ. ಮೊದಲಿದ್ದ ಎಸ್ಕಾರ್ಟ್ ಸಿಬ್ಬಂದಿ ಸುಮಾರು 15 ಕಿಲೋಮೀಟರ್ ವರೆಗೆ ಯು.ಟಿ. ಖಾದರ್ ಅವರನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಯುವಕನನ್ನು ಗಮನಿಸಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಲಾಗಿದೆ.
ಯುವಕನನ್ನು ಹಿಡಿಯಲು ಮತ್ತೊಂದು ಎಸ್ಕಾರ್ಟ್ ಬಂದಿದೆ. ಆದರೆ, ಯುವಕನನ್ನು ಪೊಲೀಸರು ಬಂಧಿಸುವ ವೇಳೆಯಲ್ಲಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬೆಳವಣಿಗೆ ತೀವ್ರ ಆತಂಕ ಮೂಡಿಸಿದೆ. ನಾನು ಫೋನ್ ನಲ್ಲಿ ಮಾತನಾಡುತ್ತಿದ್ದ ಕಾರಣ ಈ ಬೆಳವಣಿಗೆಯನ್ನು ಗಮನಿಸಿರಲಿಲ್ಲ. ಗೃಹಸಚಿವರು ಉತ್ತಮವಾದ ಎಸ್ಕಾರ್ಟ್ ನೀಡಿದ್ದಾರೆ ಎಂದು ಖಾದರ್ ಹೇಳಿದ್ದಾರೆ.
ಮೈಸೂರಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಅವರ ಮೇಲೆ ದಾಳಿ ನಡೆದ ನಂತರದಲ್ಲಿ ಖಾದರ್ ಅವರಿಗೆ ಎಸ್ಕಾರ್ಟ್ ನೀಡಲಾಗಿದೆ. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು ಖಾದರ್ ಅವರನ್ನು ಹಿಂಬಾಲಿಸಿಕೊಂಡು ಬಂದ ಅಪರಿಷಚಿತ ಯುವಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.