ಬೆಳಗಾವಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣ ವಿಧಾನಸಭಾ ಕಲಾಪದಲ್ಲಿ ಪ್ರತಿಧ್ವನಿಸಿದ್ದು, ಗದ್ದಲ-ಕೋಲಾಹಲಕ್ಕೆ ಕಾರಣವಾಗಿದೆ. ಲಾಠಿ ಚಾರ್ಜ್ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀದಿದ ಬಳಿಕವೂ ಬಿಜೆಪಿ ನಾಯಕರು ಸದನದ ಬಾವಿಗಿಳಿದು ಹೋರಾಟ ನಡೆಸಿ, ಇನ್ನಷ್ಟು ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಕಲಾಪವನ್ನು ಮುಂದೂಡಿದ್ದಾರೆ.
ಸ್ಪೀಕರ್ ಖಾದರ್ ಸದನದ ಕಲಾಪ ಮುಂದೂಡುತ್ತಿದ್ದಂತೆ ಬಿಜೆಪಿ ಸದಸ್ಯರು ರೊಚ್ಚಿಗೆದ್ದು ಇನ್ನಷ್ಟು ಗಲಾಟೆ ನಡೆಸಿದ್ದಾರೆ. ಬಳಿಕ ಸ್ಪೀಕರ್ ಖಾದರ್ ಸುವರ್ನ ಸೌಧದ ತಮ್ಮ ಕಚೇರಿಯಲ್ಲಿ ಬಿಜೆಪಿ ನಾಯಕರನ್ನು ಸಂಧಾನ ಸಭೆಗೆ ಕರೆದಿದ್ದಾರೆ. ಈ ವೇಳೆ ಬಿಜೆಪಿ ನಾಯಕರು ಸ್ಪೀಕರ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ಯು.ಟಿ.ಖಾದರ್, ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸಿದರೆ ಹೇಗೆ ಎಂದು ರೋಷಾವೇಷ ವ್ಯಕ್ತಪಡಿಸಿದ್ದಾರೆ. ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿರುವ ವಿಚಾರವಾಗಿ ಬಿಜೆಪಿ ಸದಸ್ಯರಿಗೆ ಇನ್ನಷ್ಟು ಚರ್ಚೆಗೆ ಅವಕಾಶ ಕೊಡದೇ ಬೇರೆ ವಿಷಯಗಳ ಚರ್ಚೆಗೆ ಅವಕಾಶ ನೀಡಿದ್ದು ಸರಿಯಲ್ಲ. ವಿಪಕ್ಷಗಳಿಗೆ ಚರ್ಚೆಗೇ ಅವಕಶ ನೀಡುತ್ತಿಲ್ಲ. ಇದು ಸ್ಪೀಕರ್ ಸ್ಥಾನಕ್ಕೆ ಅಗೌರವ ಸೂಚಿಸಿದಂತೆ ಎಂದು ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.