ಟೈಪ್-2 ಮಧುಮೇಹಕ್ಕೆ ಸಮಯಕ್ಕೆ ಸರಿಯಾದ ಔಷಧಿ ಸಿಗದೆ ಹೋದಲ್ಲಿ ಅಪಾಯಕಾರಿಯಾಗಿದೆ. ಪ್ರೋಟೀನ್, ಆರೋಗ್ಯಕರ ಕೊಬ್ಬು, ಖನಿಜ, ವಿಟಮಿನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಆಹಾರವನ್ನು ಸೇವಿಸುವಂತೆ ತಜ್ಞರು ಸಲಹೆ ನೀಡುತ್ತಾರೆ.
ಸಕ್ಕರೆ ಪ್ರಮಾಣ ಕಡಿಮೆಯಿರುವ ಆಹಾರ ಸೇವನೆ ಎಂಬ ಸಂಗತಿ ಬಂದಾಗ ಚರ್ಚೆಗೆ ಕಾರಣವಾಗುವುದು ಹಣ್ಣುಗಳು. ಹಣ್ಣುಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಸಕ್ಕರೆಯಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಮಧುಮೇಹಿಗಳಿಗೆ ಹಣ್ಣಿನ ರಸವನ್ನು ಶಿಫಾರಸು ಮಾಡುವುದಿಲ್ಲ. ಹೆಚ್ಚಿನ ಸಕ್ಕರೆ ಮತ್ತು ಕಡಿಮೆ ಫೈಬರ್, ಯಾವುದೇ ಸಮಯದಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಆದ್ರೆ ಹೊಸ ಅಧ್ಯಯನವೊಂದು ಮಹತ್ವದ ಸುದ್ದಿ ನೀಡಿದೆ.
ಕೆಲವೇ ನಿಮಿಷಗಳಲ್ಲಿ ರಕ್ತದ ಸಕ್ಕರೆಯನ್ನು ಕಡಿಮೆ ಮಾಡುವ ಹಣ್ಣಿನ ರಸದ ಬಗ್ಗೆ ಅಧ್ಯಯನ ನಡೆದಿದೆ. ಅದು ಬೇರೆ ಯಾವುದೇ ಹಣ್ಣಲ್ಲ. ಎಲ್ಸೆವಿಯರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ದಾಳಿಂಬೆ ಹಣ್ಣು ಒಳ್ಳೆಯದು. ದಾಳಿಂಬೆ ಹಣ್ಣು, ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಅಲ್ಪಾವಧಿ ಪರಿಣಾಮ ಬೀರುತ್ತದೆ. ದಾಳಿಂಬೆ ರಸ ಸೇವಿಸಿದ ಮೂರು ಗಂಟೆಗಳ ನಂತರ ಟೈಪ್ -2 ಮಧುಮೇಹ ಹೊಂದಿರುವ ರೋಗಿಗಳ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಲಿಲ್ಲ.
ಮಧುಮೇಹ ಹೊಂದಿರುವ 85 ರೋಗಿಗಳ ರಕ್ತ ಪರೀಕ್ಷೆ ಮಾಡಲಾಗಿದೆ. ಮೊದಲು 12 ಗಂಟೆ ಉಪವಾಸದ ನಂತ್ರ ರಕ್ತ ಪಡೆಯಲಾಗಿದೆ. ನಂತ್ರ ದೇಹದ ತೂಕಕ್ಕೆ ತಕ್ಕಂತೆ ಪ್ರತಿ ಕಿಲೋಗ್ರಾಮ್ ಆಧಾರದ ಮೇಲೆ 1.5 ಮಿಲಿ ದಾಳಿಂಬೆ ರಸವನ್ನು ನೀಡಲಾಗಿದೆ. ಜ್ಯೂಸ್ ಸೇವನೆಯ 3 ಗಂಟೆ ನಂತ್ರ ಮತ್ತೆ ರಕ್ತ ಪರೀಕ್ಷೆ ಮಾಡಲಾಗಿದೆ.
ಮಧುಮೇಹ ರೋಗಿಗಳಲ್ಲಿ ರಸವನ್ನು ಸೇವಿಸಿದ ಮೂರು ಗಂಟೆಗಳ ನಂತರ ಇನ್ಸುಲಿನ್ ಪ್ರತಿರೋಧನ ಕಂಡುಬಂತು. ಪ್ರಾರಂಭದಲ್ಲಿ ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟವನ್ನು ಹೊಂದಿರುವ ರೋಗಿಗಳಲ್ಲಿ ಇದರ ಪರಿಣಾಮವು ಹೆಚ್ಚಿತ್ತು. ಮಧುವೇಹ ಹೊಂದಿರುವವರು ಎರಡುವರೆ ಗಂಟೆಗಳ ಕಾಲ ಪ್ರತಿ ನಿತ್ಯ ವ್ಯಾಯಾಮ ಮಾಡಬೇಕು.
ಟೈಪ್ 2 ಮಧುಮೇಹದ ಲಕ್ಷಣ:
ಆಗಾಗ್ಗೆ ಮೂತ್ರ ವಿಸರ್ಜನೆ, ಅಧಿಕ ತೂಕ ನಷ್ಟ, ಸುಲಭವಾಗಿ ವಾಸಿಯಾಗದ ಗಾಯಗಳು, ಖಾಸಗಿ ಅಂಗದ ಸುತ್ತಲೂ ತುರಿಕೆ, ತೀವ್ರ ಬಾಯಾರಿಕೆ, ನಿಶ್ಯಕ್ತಿ ಇವು ಲಕ್ಷಣಗಳಾಗಿವೆ.