ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಗೋಹತ್ಯೆ ಆರೋಪದ ಮೇಲೆ 15-20 ಜನರ ಗುಂಪು ಹಲ್ಲೆ ನಡೆಸಿದ ನಂತರ ಇಬ್ಬರು ಬುಡಕಟ್ಟು ಪುರುಷರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ದೂರುದಾರರು ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಾಯಕರು, ದಾಳಿಕೋರರು ಬಜರಂಗದಳಕ್ಕೆ ಸೇರಿದವರು ಎಂದು ಆರೋಪಿಸಿದ್ದಾರೆ.
ಸೋಮವಾರ ಮುಂಜಾನೆ 2.30 ರಿಂದ 3 ಗಂಟೆಯ ನಡುವೆ ಕುರೈ ಪೊಲೀಸ್ ಠಾಣಾ ವ್ಯಾಪ್ತಿಯ ಸಿಮಾರಿಯಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸುಮಾರು 20 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಇದರಲ್ಲಿ ಆರು ಮಂದಿ ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ನಂತರ, ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಕಾಕೋಡಿಯಾ ನೇತೃತ್ವದ ಗುಂಪು ಜಬಲ್ಪುರ-ನಾಗ್ಪುರ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದೆ. ಸಿಯೋನಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ.ಮಾರಾವಿ ಮಾಹಿತಿ ನೀಡಿ, ಕುವಾರೈ ಪೊಲೀಸ್ ಠಾಣೆಯಲ್ಲಿ ಕೊಲೆಯ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸ್ ತಂಡಗಳು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿವೆ. ಕೆಲವು ಆರೋಪಿಗಳನ್ನು ಹೆಸರಿಸಲಾಗಿದ್ದು, ಉಳಿದವರ ಗುರುತಿಸಲಾಗಿಲ್ಲ. ನಾವು 2-3 ಶಂಕಿತರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.