ಮಂಗಳೂರು: ಬಿಜೆಪಿ ವಿಜಯೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳದ ಬೋಳಿಯಾರು ಬಳಿ ನಡೆದಿದೆ.
ಸುರೇಶ ಮತ್ತು ನಂದಕುಮಾರ್ ಎಂಬುವರು ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಇಬ್ಬರು ಬೋಳಿಯಾರು ನಿವಾಸಿಗಳಾಗಿದ್ದಾರೆ. ಭಾನುವಾರ ರಾತ್ರಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಲಾಗಿತ್ತು. ವಿಜಯೋತ್ಸವ ಮುಗಿಸಿದ ಸುರೇಶ ಮತ್ತು ನಂದಕುಮಾರ ಬೋಳಿಯಾರು ಪೇಟೆಯಲ್ಲಿ ತೆರಳುವಾಗ ಅಪರಿಚಿತ ದುಷ್ಕರ್ಮಿಗಳ ತಂಡ ದಾಳಿ ಮಾಡಿ ಏಕಾಏಕಿ ಇಬ್ಬರಿಗೆ ಚಾಕುವಿನಿಂದ ಇರಿದಿದೆ.
ಇಬ್ಬರನ್ನು ದೇರಳೆಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.