ದೇಶದಲ್ಲಿ ವಾಹನ ಸಂಖ್ಯೆ ಹಾಗೂ ಎಕ್ಸ್‌ಪ್ರೆಸ್ ಹೈವೇಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ಟೋಲ್ ಪ್ಲಾಜಾ ಸಹ ಅದೇ ವೇಗದಲ್ಲಿ ಹೆಚ್ಚಾಗ್ತಿದೆ. ಪ್ರತಿಯೊಬ್ಬ ವಾಹನ ಸವಾರ, ಟೋಲ್ ಪ್ಲಾಜಾದಲ್ಲಿ ಹಣ ಪಾವತಿಸಿ ಮುಂದೆ ಹೋಗ್ಬೇಕಾಗುತ್ತದೆ. ಆದ್ರೆ ಟೋಲ್ ಪ್ಲಾಜಾ ಮೂಲಕ ನೀವು ಹಣ ಪಾವತಿಸದೆ ಹೋಗ್ಬಹುದು. ಅದಕ್ಕೆ ಎರಡು ನಿಯಮ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ಸ್ಪಷ್ಟಪಡಿಸಿದೆ.
ಮೇ 26 , 2021 ರ ಆದೇಶದ ಮೂಲಕ ರಾಷ್ಟ್ರೀಯ ಹೆದ್ದಾರಿ ಚಾಲಕರಿಗೆ ಹೆಚ್ಚಿನ ಪರಿಹಾರ ಮತ್ತು ಹಕ್ಕುಗಳನ್ನು ನೀಡಿದೆ. ರಾಷ್ಟ್ರೀಯ ಹೆದ್ದಾರಿಯ ಈ ಆದೇಶದಲ್ಲಿ, ಟೋಲ್‌ಗೆ ಸಂಬಂಧಿಸಿದ ಎರಡು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದರ ಸಹಾಯದಿಂದ ಚಾಲಕರು ಟೋಲ್ ಪಾವತಿಸದೆ ಟೋಲ್ ಮಾರ್ಗವನ್ನು ಅನುಸರಿಸಬಹುದು. ಈ ಬಗ್ಗೆ ಸಮಸ್ಯೆ ಆದಲ್ಲಿ ಚಾಲಕರು ಟೋಲ್-ಫ್ರೀ ಸಂಖ್ಯೆಗೆ ನೇರವಾಗಿ ಕರೆ ಮಾಡಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ.
ಟೋಲ್ ಪ್ಲಾಜಾದಲ್ಲಿ ಉದ್ದನೆಯ ಸರತಿ ಸಾಲು ಇದ್ದರೆ ಮತ್ತು ನಿಮ್ಮ ವಾಹನವನ್ನು ಟೋಲ್ ಪ್ಲಾಜಾದಿಂದ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ದೂರದಲ್ಲಿ ನಿಲ್ಲಿಸಿದರೆ, ನೀವು ಟೋಲ್ ಪಾವತಿಸಬೇಕಾಗಿಲ್ಲ ಎಂದು ಹೇಳಲಾಗಿದೆ. ಇದಕ್ಕಾಗಿ, ಪ್ರತಿ ಟೋಲ್ ಪ್ಲಾಜಾದಲ್ಲಿ 100 ಮೀಟರ್ ದೂರವನ್ನು ಸೂಚಿಸುವ ಹಳದಿ ಪಟ್ಟಿಯನ್ನು ಇರಿಸಲಾಗುತ್ತದೆ. ನಿಮ್ಮ ವಾಹನವು 100 ಮೀಟರ್‌ಗಿಂತ ಹೆಚ್ಚು ದೂರದಲ್ಲಿದ್ದರೆ, ನೀವು ಪಾವತಿಸದೆಯೇ ಟೋಲ್ ಪ್ಲಾಜಾ ಮೂಲಕ ಹಾದುಹೋಗಬಹುದು.
ಎರಡನೇ ನಿಯಮದ ಪ್ರಕಾರ, ಟೋಲ್ ಪ್ಲಾಜಾ ಮೂಲಕ ಹಾದುಹೋಗಲು 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಾಯುವಂತಿಲ್ಲ. ಟೋಲ್ ಪ್ಲಾಜಾದಲ್ಲಿ ಯಾರಾದರೂ 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಾಯಬೇಕಾದರೆ, ಅವರು ಯಾವುದೇ ಶುಲ್ಕವನ್ನು ಪಾವತಿಸದೆ ಟೋಲ್ ಪ್ಲಾಜಾ ಮೂಲಕ ಹಾದುಹೋಗಬಹುದು ಎಂದು ಈ ನೀತಿ ಹೇಳುತ್ತದೆ. ಟೋಲ್ ಪ್ಲಾಜಾದಲ್ಲಿ ನೀವು 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಾಯುವ ಸ್ಥಿತಿ ಬಂದ್ರೆ ನೀವು ಸಹಾಯವಾಣಿ ಸಂಪರ್ಕಿಸಬಹುದು.
ಆದ್ರೆ ಈ ಎರಡೂ ಲಾಭವನ್ನು ಬಹುತೇಕ ಯಾವ ಚಾಲಕರು ಪಡೆಯುತ್ತಿಲ್ಲ. ಇದಕ್ಕೆ ಕಾರಣ ಟೋಲ್ ಖಾಸಗಿ ಕಂಪನಿ ಕೈನಲ್ಲಿರೋದು ಒಂದಾದ್ರೆ ಎರಡನೇಯದು ನೌಕರರಿಗೆ ಈ ನಿಯಮ ತಿಳಿಯದೆ ಇರೋದಾಗಿದೆ.