ತಿರುವನಂತಪುರಂ: ಕೀಟ ತಜ್ಞ ಹಾಗೂ ಸಾಹಿತಿ ಕೆ.ಎನ್. ಗಣೇಶಯ್ಯ ಅವರ ಹೆಸರನ್ನು ಹೊಸ ಪ್ರಭೇದದ ಅಪರೂಪದ ಇರುವಯೊಂದಕ್ಕೆ ಇಡಲಾಗಿದೆ. ಪ್ಯಾರಸಿಸ್ಸಿಯಾ ಗಣೇಶಯ್ಯ ಎಂದು ಪರಿಸರ ವಿಜ್ಞಾನಿ ಮತ್ತು ಚಿಂತಕರಾದ ಪ್ರೊ. ಗಣೇಶಯ್ಯ ಅವರ ಹೆಸರನ್ನು ಇರುವೆಗೆ ಇಡಲಾಗಿದೆ.
ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್ಮೆಂಟ್ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರಜ್ಞರು ಹಿಮಾಲಯದಲ್ಲಿ ಅಪರೂಪದ ಇರುವೆಗಳನ್ನು ಪತ್ತೆ ಮಾಡಿದ್ದಾರೆ. ಈ ಸಂಶೋಧಕರ ತಂಡದಲ್ಲಿ ಕೀಟಶಾಸ್ತ್ರಜ್ಞರಾಗಿರುವ ಪ್ರಿಯದರ್ಶನನ್, ಧರ್ಮರಾಜನ್, ಸಹನಶ್ರೀ, ಅನಿರುದ್ಧ್ ಮರಾಠೆ, ಶ್ರೀಲಂಕಾದ ಎಸ್. ಉದಯಕಾಂತ್ ಅವರಿದ್ದರು.
ಜಿನಸ್ ಪ್ಯಾರಸಿಸ್ಸಿಯಾ ಮತ್ತು ಸಿಸ್ಸಿಯಾ ಪ್ರಭೇದಕ್ಕೆ ಸೇರಿದ ಎರಡು ಅಪರೂಪದ ಇರುವೆಗಳನ್ನು ಅರುಣಾಚಲ ಪ್ರದೇಶದ ಈಗಲ್ ನೆಸ್ಟ್ ವನ್ಯಜೀವಿ ಅಭಯಾರಣ್ಯದಲ್ಲಿ ಪತ್ತೆ ಮಾಡಲಾಗಿದೆ. ಈ ಇರುವೆಗಳಲ್ಲಿ ಒಂದಕ್ಕೆ ಪ್ಯಾರಸಿಸ್ಸಿಯಾ ಗಣೇಶಯ್ಯ ಮತ್ತೊಂದಕ್ಕೆ ಸಿಸ್ಸಿಯಾ ಇಂಡಿಕಾ ಎಂದು ಹೆಸರಿಡಲಾಗಿದೆ. ಹಳದಿ ಮಿಶ್ರಿತ ಕಂದು ಬಣ್ಣ ಮತ್ತು ಕೆಂಪು ಮಿಶ್ರಿತ ಕಂದು ಬಣ್ಣದ ಇರುವೆಗಳ ಮೇಲ್ಮೈ ಮೈಕ್ರೋ ಪಂಕ್ಚರ್ ಗಳಿಂದ ಕೂಡಿದೆ ಎಂದು ಹೇಳಲಾಗಿದೆ.