ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ನೀರಿಗೆ ಬಿದ್ದು ಅತ್ತೆ-ಸೊಸೆ ಪ್ರಾಣ ಕಳೆದಕೊಂಡಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ, ಜಬಲ್‌ಪುರದ ಹೊಸ ಭೇರಘಾಟ್‌ನ ಪ್ರವಾಸಿ ತಾಣದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಲ್ಲಿನಮೇಲೆ ನಿಂತಿದ್ದ ಇಬ್ಬರು ಮಹಿಳೆಯರು ಕಾಲು ಜಾರಿ ನರ್ಮದಾ ನದಿಗೆ ಬಿದ್ದಿದ್ದಾರೆ. ಶನಿವಾರ ಮಹಿಳೆಯರ ಮೃತದೇಹಗಳನ್ನು ಹೊರತೆಗೆದು ಪೊಲೀಸರು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಮೃತ ಮಹಿಳೆಯರನ್ನು ಮುಂಬೈನ ಹಂಸಾ ಸೋನಿ (50) ಮತ್ತು ಆಕೆಯ ಸೊಸೆ ರಿದ್ಧಿ ಪಿಚಾಡಿಯಾ (22) ಎಂದು ಗುರುತಿಸಲಾಗಿದೆ.
ಮುಂಬೈನ ನಿವಾಸಿ ಸೋನಿ ಕುಟುಂಬ ಭೇರಘಾಟ್‌ಗೆ ವೆಕೇಷನ್ ಗೆ ಬಂದಿದ್ದಾರೆ. ಹತ್ತಿರದ ಹೋಟೆಲ್‌ನಲ್ಲಿ ತಂಗಿದ್ದ ಅವರು, ಶುಕ್ರವಾರ ಸಂಜೆ, ಹೊಸ ಭೇರಘಾಟ್‌ಗೆ ಭೇಟಿ ನೀಡಲು ನಿರ್ಧರಿಸಿದರು. ಮೃತ ಹಂಸಾ ಸೋನಿ ಮತ್ತು ಅವರ ಸೊಸೆ ರಿದ್ಧಿ ಪಿಚಾಡಿಯಾ ಅವರು ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.
ಹಂಸ ನಿಯಂತ್ರಣ ತಪ್ಪಿ ನರ್ಮದಾ ನದಿಗೆ ಬಿದ್ದರು, ಅವರನ್ನ ರಕ್ಷಿಸಲು ರಿದ್ಧಿ ನೀರಿಗೆ ಹಾರಿದ್ದಾರೆ. ಬಲವಾದ ಪ್ರವಾಹದಲ್ಲಿ ಇಬ್ಬರೂ ಕೊಚ್ಚಿಕೊಂಡು ಹೋದರು. ಸ್ಥಳೀಯ ಈಜುಗಾರರ ಸಹಾಯದಿಂದ ಶೋಧ ನಡೆಸಿದಾಗ ಶುಕ್ರವಾರ ಸಂಜೆ ಹಂಸಾ ಸೋನಿ ಶವ ಪತ್ತೆಯಾಗಿದ್ದು, ಶನಿವಾರ ರಿದ್ದಿ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಬರ್ಗಿ ಪ್ರದೇಶದ ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‌ಪಿ) ಪ್ರಿಯಾಂಕಾ ಶುಕ್ಲಾ ತಿಳಿಸಿದ್ದಾರೆ.
ಇಂತಹ ಘಟನೆ ಇದೇ ಮೊದಲು ನಡೆದಿಲ್ಲ. ಈ ಹಿಂದೆ 2017ರಲ್ಲಿ ಭೇರಾಘಾಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಬಾಲಕನೊಬ್ಬ ನದಿಗೆ ಜಾರಿ ಬಿದ್ದು, ಆತನನ್ನು ರಕ್ಷಿಸುವ ಪ್ರಯತ್ನದಲ್ಲಿ ಆತನ ಸಹೋದರಿ ನದಿಗೆ ಹಾರಿ ಸಾವನ್ನಪ್ಪಿದ್ದರು. ಜಿಲ್ಲಾಡಳಿತವು ಸ್ಥಳದಲ್ಲಿ ಸೆಲ್ಫಿ ನಿಷೇಧದ ಎಚ್ಚರಿಕೆ ಫಲಕ ಹಾಕಿದ್ದು, ಜನರ ಜೀವ ಉಳಿಸಲು ಡೈವರ್‌ಗಳನ್ನು ನೇಮಿಸಿದೆ.