ಪ್ರಯಾಣಿಕರ ವರ್ತನೆ ಬಗ್ಗೆ ಪದೇ ಪದೇ ಸುದ್ದಿಯಾಗ್ತಿರುವ ದೆಹಲಿ ಮೆಟ್ರೋ ಮತ್ತೊಂದು ಪ್ರಕರಣಕ್ಕೆ ಸಾಕ್ಷಿಯಾಗಿ ಸುದ್ದಿಯಾಗಿದೆ. ಆನ್ ಲೈನ್‌ನಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ ಇಬ್ಬರು ಪುರುಷರು ಜಗಳವಾಡಿದ್ದಾರೆ. ಕೆಲವು ಪ್ರಯಾಣಿಕರು ಜಗಳ ನಿಲ್ಲಿಸಲು ಯತ್ನಿಸಿದರೂ ಅವರಿಬ್ಬರೂ ಪರಸ್ಪರ ಗುದ್ದುವುದು, ಹೊಡೆಯುವುದನ್ನು ಮಾಡಿದ್ದಾರೆ.
ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಪ್ರಯಾಣಿಕರನ್ನು ಜವಾಬ್ದಾರರಾಗಿರಲು ವಿನಂತಿಸಿದೆ. ಇಂತಹ ಅಶಿಸ್ತಿನ ಘಟನೆಗಳನ್ನು ವರದಿ ಮಾಡಲು ಸಹ ಪ್ರಯಾಣಿಕರನ್ನು ಕೇಳಿದೆ. ಹೇಳಿಕೆಯೊಂದರಲ್ಲಿ ಭಾರತದ ಅತ್ಯಂತ ಜನನಿಬಿಡ ಮೆಟ್ರೋ ನೆಟ್‌ವರ್ಕ್‌ಗಳಲ್ಲಿ ಒಂದಾದ ದೆಹಲಿ ಮೆಟ್ರೋ, “ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ನಾವು ವಿನಂತಿಸುತ್ತೇವೆ. ಇತರ ಪ್ರಯಾಣಿಕರು ಯಾವುದೇ ಆಕ್ಷೇಪಾರ್ಹ ನಡವಳಿಕೆಯನ್ನು ಗಮನಿಸಿದರೆ ಅವರು ತಕ್ಷಣವೇ DMRC ಸಹಾಯವಾಣಿ ಅಥವಾ ರೈಲ್ವೆ ನಿಲ್ದಾಣದಲ್ಲಿ ಮಾಹಿತಿ ನೀಡಿ” ಎಂದು ವಿನಂತಿಸಿದೆ.
ಮಾಧ್ಯಮ ವರದಿಗಳ ಪ್ರಕಾರ ರಾಜಾ ನಹರ್ ಸಿಂಗ್ ಮತ್ತು ಕಾಶ್ಮೀರಿ ಗೇಟ್ ನಿಲ್ದಾಣಗಳ ನಡುವಿನ ನೇರಳೆ ಮಾರ್ಗದಲ್ಲಿ ಗಲಾಟೆ ನಡೆದಿದೆ. ಈ ಹೊಡೆದಾಟಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.