ನವದೆಹಲಿ: ಪಂಜಾಬ್ ನ ಸಿರ್ಹಿಂದ್ ಮಾಧೋಪುರ ಬಳಿ ಭಾನುವಾರ ಬೆಳಗ್ಗೆ ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಇಬ್ಬರು ಲೋಕೋ ಪೈಲಟ್ ಗಳು ಗಾಯಗೊಂಡಿದ್ದಾರೆ .
ಅಪಘಾತದಲ್ಲಿ ಗೂಡ್ಸ್ ರೈಲಿನ ಇಂಜಿನ್ ಪಲ್ಟಿಯಾಗಿ ಅದರಲ್ಲಿ ಪ್ಯಾಸೆಂಜರ್ ರೈಲು ಸಿಲುಕಿಕೊಂಡಿದೆ. ಅಪಘಾತದಲ್ಲಿ ಗಾಯಗೊಂಡ ಇಬ್ಬರು ಲೋಕೋ ಪೈಲಟ್ ಗಳನ್ನು ಉತ್ತರ ಪ್ರದೇಶದ ಸಹಾರನ್ಪುರದ ವಿಕಾಸ್ ಕುಮಾರ್(37), ಹಿಮಾಂಶುಕುಮಾರ್(31) ಎಂದು ಗುರುತಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನು ಫತೇಘರ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಟಿಯಾಲಾದ ರಾಜೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಒಂದು ಗೂಡ್ಸ್ ರೈಲಿನ ಇಂಜಿನ್ ಸಡಿಲಗೊಂಡು ಮತ್ತೊಂದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಅಂಬಾಲಾದಿಂದ ಜಮ್ಮು ತಾವಿಗೆ ಹೋಗುತ್ತಿದ್ದ ವಿಶೇಷ ಪ್ಯಾಸೆಂಜರ್ ರೈಲು ಸಿಲುಕಿಕೊಂಡಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.