ವಿಶ್ವದಾದ್ಯಂತ ಕೊರೊನಾ ಭಯ ಹುಟ್ಟಿಸಿದೆ. ಕೊರೊನಾದ ಮೊದಲ ಅಲೆ, ಎರಡನೇ ಅಲೆ,ಮೂರನೇ ಅಲೆ ಹೀಗೆ ಒಂದೊಂದು ಅಲೆಯಲ್ಲೂ ಒಂದೊಂದು ವೈರಸ್ ರೂಪಾಂತರ ಅನೇಕರ ಜೀವ ಪಡೆದಿದೆ. ಕೊರೊನಾ ಹಿನ್ನಲೆಯಲ್ಲಿ ವಿದೇಶಕ್ಕೆ ಪ್ರಯಾಣ ಬೆಳೆಸುವುದು ಹಾಗೂ ವಿದೇಶಿಗರು ಭಾರತಕ್ಕೆ ಬರುವುದು ಸಾಧ್ಯವಾಗ್ತಿಲ್ಲ. ಕೆಲ ವಿಶೇಷ ವಿಮಾನಗಳನ್ನು ಹೊರತುಪಡಿಸಿ ವಾಣಿಜ್ಯ ವಿಮಾನಗಳು ಓಡಾಡ್ತಿಲ್ಲ.
ಈ ಮಧ್ಯೆಯೂ ಭಾರತಕ್ಕೆ 2 ಲಕ್ಷಕ್ಕೂ ಹೆಚ್ಚು ವಿದೇಶಿಗರು ಬಂದಿದ್ದಾರೆ. ಹೌದು, ಚಿಕಿತ್ಸೆಗಾಗಿ ವಿದೇಶಿಗರು ಭಾರತಕ್ಕೆ ಬಂದಿದ್ದಾರೆ. ಕೊರೋನಾ ಅವಧಿಯಲ್ಲಿ ಒಂದು ಲಕ್ಷ 83 ಸಾವಿರಕ್ಕೂ ಹೆಚ್ಚು ಜನರು ಚಿಕಿತ್ಸೆಗಾಗಿ ಬಂದಿದ್ದಾರೆ. ಭಾರತಕ್ಕೆ ಬಂದ ವಿದೇಶಿಗರಲ್ಲಿ, ಅಫ್ಘಾನಿಸ್ತಾನ, ಅಮೆರಿಕಾ ಮತ್ತು ಫ್ರಾನ್ಸ್ ಜನರೂ ಸೇರಿದ್ದಾರೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ, ಕೊರೊನಾ ಅವಧಿಯಲ್ಲಿ ಕಡಿಮೆ ರೋಗಿಗಳು ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದಾರೆ.
ಅಂಕಿಅಂಶಗಳನ್ನು ನೋಡಿದರೆ, 2016 ರಲ್ಲಿ ಭಾರತಕ್ಕೆ ಚಿಕಿತ್ಸೆಗಾಗಿ ಬಂದ ವಿದೇಶಿಗರ ಸಂಖ್ಯೆ 4 ಲಕ್ಷ 27 ಸಾವಿರ. 2019 ರಲ್ಲಿ ಈ ಸಂಖ್ಯೆ ಸುಮಾರು 7 ಲಕ್ಷವಿತ್ತು. 2020 ರಲ್ಲಿ, ಕೊರೊನಾ ಸಮಯದಲ್ಲಿ ಸುಮಾರು ಎರಡು ಲಕ್ಷ ಜನರು ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದಾರೆ.
ಚಿಕಿತ್ಸೆಗೆ ಬರುವ ಅರ್ಧಕ್ಕಿಂತ ಹೆಚ್ಚು ಮಂದಿ ಬಾಂಗ್ಲಾದೇಶದವರು. ಅಲ್ಲಿನ ಜನರು, ಭಾರತದಲ್ಲಿ ಸಿಗುವ ಚಿಕಿತ್ಸೆ ಬಗ್ಗೆ ಹೆಚ್ಚು ನಂಬಿಕೆ ಹೊಂದಿದ್ದಾರೆ. ಇರಾಕ್ ಮತ್ತು ನಂತರ ಅಫ್ಘಾನಿಸ್ತಾನದ ಜನರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಈ ವರ್ಷ ಬಾಂಗ್ಲಾದೇಶದಿಂದ ಸುಮಾರು 1 ಲಕ್ಷ ಜನರು, ಇರಾಕ್ ನಿಂದ 16 ಸಾವಿರ, ಅಫ್ಘಾನಿಸ್ತಾನದಿಂದ 16 ಸಾವಿರ, ಯುಕೆಯಿಂದ 380 ಮಂದಿ, ಪಾಕಿಸ್ತಾನದಿಂದ 296 ಮಂದಿ ಮತ್ತು ಆಸ್ಟ್ರೇಲಿಯಾದಿಂದ 200 ಜನರು ಬಂದಿದ್ದಾರೆ.