ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಪತ್ರಿಕಾರಂಗಕ್ಕೆ ಆಘಾತದ ಮೇಲೆ ಆಘಾತ ಎದುರಾಗಿದೆ. ಒಂದೇ ದಿನ ಇಬ್ಬರು ಪತ್ರಕರ್ತರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಿವಮೊಗದ ಖ್ಯಾತ ವರದಿಗಾರ ಕೆ.ವಿ. ಶಶಿಧರ್ ಹಾಗೂ ಪತ್ರಿಕಾ ಛಾಯಾಗ್ರಾಹಕ ನಂದನ್ ಇಬ್ಬರು ಒಂದೇ ದಿನ ಇಹಲೋಕ ತ್ಯಜಿಸಿದ್ದಾರೆ. ಇಬ್ಬರು ಪತ್ರಕರ್ತರ ಕುಟುಂಬದಲ್ಲಿ ಕತ್ತಲು ಆವರಿಸಿದೆ.
ಕೆ.ವಿ. ಶಶಿಧರ್ ಕಳೆದ 16 ವರ್ಷಗಳಿಂದ ಮಾಧ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪಬ್ಲಿಕ್ ಟಿ.ವಿ ಜಿಲ್ಲಾ ವರದಿಗಾರರಾಗಿದ್ದ ಶಶಿಧರ್ ಅನಾರೋಗ್ಯದಿಂದ ಶನಿವಾರ ಜ.11ರಂದು ನಿಧನರಾಗಿದ್ದಾರೆ.
ಶಶಿಧರ್ ಮೂಲತಃ ಅರಸಿಕೆರೆ ತಾಲೂಕಿನ ಕಲ್ಲಹಳ್ಳಿ ಗ್ರಾಮದವರು. ಅವರಿಗೆ ಕೇವಲ 40 ವರ್ಷ ವಯಸ್ಸಾಗಿತ್ತು. ಶಶಿಧರ್ ಸಾವಿನ ಬೆನ್ನಲ್ಲೇ ಶಿವಮೊಗ್ಗದ ಇನ್ನೋರ್ವ ಖ್ಯಾತ ಪತ್ರಿಕಾ ಛಾಯಾಗ್ರಾಹಕ ನಂದನ್ ಎಂಬುವವರು ಕೂಡ ವಿಧಿವಶರಾಗಿದ್ದಾರೆ.
ಶಿವಮೊಗ್ಗ ನಗರದಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಂದನ್ (57) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ತಡರಾತ್ರಿ 1:30ರ ಸುಮಾರಿಗೆ ನಂದನ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕುಟುಂಬದವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಂದನ್ ಇಹಲೋಕ ತ್ಯಜಿಸಿದ್ದಾರೆ.
ಮೃತರು ಪತ್ನಿ, ಪುತ್ರ, ಪುತ್ರಿ, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇಂದು ರೈಲ್ವೆ ನಿಲ್ದಾಣ ಬಳಿ ಇರುವ ಎ.ಎ.ಕಾಲೋನಿಯಲ್ಲಿರುವ ನಿವಾಸದಲ್ಲಿ ನಂದನ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.
ಹಲವು ವರ್ಷಗಳಿಂದ ನಂದನ್ ಶಿವಮೊಗ್ಗದಲ್ಲಿ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುತ್ತಿದರು. ಅವರು ತೆಗೆದ ಛಾಯಾಚಿತ್ರಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಗೌರವಗಳಿಗೆ ಪಾತ್ರವಾಗಿದ್ದವು. ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳಿಗೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸದಾಕಾಲ ಕ್ರಿಯಾಶೀಲತೆ, ಚಟುವಟಿಕೆಯಿಂದ, ಸುದ್ದಿಯನ್ನು ವೇಗವಾಗಿ ಕೊಡಬೇಕು ಎಂಬ ತುಡಿತದಲ್ಲಿ, ಒತ್ತಡದ ಬದುಕಿನಲ್ಲಿಯೇ ಕಾರ್ಯನಿರ್ವಹಿಸುವ ಅನಿವಾರ್ಯತೆ ಪತ್ರಕರ್ತರು ಅಥವಾ ಸುದ್ದಿಗಾರರದ್ದು. ಆದರೆ ಅನಾರೋಗ್ಯ, ಹೃದಯಾಘಾತದಂತ ಆಕಸ್ಮಿಕ ಘಟನೆಗಳು ಅವರನ್ನು ಮಾತ್ರವಲ್ಲ ಅವರ ಇಡೀ ಕುಟುಂಬವನ್ನೇ ದಿಕ್ಕು, ತೋಚದಂತೆ ಕಂಗೆಡಿಸಿ ಬಿಡುವುದು ಮಾತ್ರ ಸುಳ್ಳಲ್ಲ. ಪತ್ರಕರ್ತರ, ಸುದ್ದಿಗಾರ ಬದುಕು-ಜೀವನಕ್ಕೂ ಸರ್ಕಾರ ಹೆಚ್ಚಿನ ಅನುಕೂಲ ಮಾಡಿಕೊಡುವಂತಾಗಬೇಕು ಎಂಬುದೇ ಎಲ್ಲರ ಆಶಯ.