ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಯುದ್ಧಸೇನಾ ವಿಮಾನಯಾನ ತರಬೇತಿ ಕೇಂದ್ರದಲ್ಲಿ ಹೆಲಿಕಾಪ್ಟರ್ ಪೈಲಟ್ಗಳಾಗಿ ತರಬೇತಿ ಪಡೆಯಲು ಇಬ್ಬರು ಮಹಿಳಾ ಅಧಿಕಾರಿಗಳು ಆಯ್ಕೆಯಾಗುವ ಮೂಲಕ ಹೊಸ ದಾಖಲೆಯನ್ನ ಬರೆದಿದ್ದಾರೆ. ನಾಸಿಕ್ನಲ್ಲಿ ಸೋಮವಾರದಿಂದ ಆರಂಭವಾದ ತರಬೇತಿಗೆ ಆಯ್ಕೆಯಾದ 47 ಸೇನಾಧಿಕಾರಿಗಳ ಪೈಕಿ ಇಬ್ಬರು ಮಹಿಳೆಯರಾಗಿದ್ದಾರೆ.
2022ರ ಜುಲೈ ತಿಂಗಳಲ್ಲಿ ಇವರ ತರಬೇತಿ ಪೂರ್ಣಗೊಳಲಿದ್ದು, ಇದಾದ ಬಳಿಕ ಫ್ಲೈಯಿಂಗ್ ಡ್ಯೂಟಿಗೆ ನಿಯೋಜನೆಗೊಳ್ಳಲಿದ್ದಾರೆ. ಒಟ್ಟು 15 ಮಂದಿ ಮಹಿಳೆಯರು ಭಾರತೀಯ ಸೇನೆಯ ವಾಯುಯಾನಕ್ಕೆ ಆಯ್ಕೆಯಾಗಲು ಸಿದ್ಧರಿದ್ದರು. ಆದರೆ ಇದರಲ್ಲಿ ಇಬ್ಬರು ಮಾತ್ರ ಪಿಎಬಿಟಿ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇಲ್ಲಿಯವರೆಗೆ ಭಾರತೀಯ ಸೇನೆಯ ವಾಯುಯಾನ ವಿಭಾಗದಲ್ಲಿ ಪುರುಷರು ಮಾತ್ರ ಕಾರ್ಯನಿರ್ವಹಿಸುತ್ತಿದ್ದರು. ಭಾರತೀಯ ಸೇನೆಯ ವಾಯುಯಾನ ವಿಭಾಗದಲ್ಲಿ ಮಹಿಳೆಯರನ್ನೂ ನೇಮಕ ಮಾಡಲು ಅವಕಾಶ ನೀಡುವ ಪ್ರಸ್ತಾಪಕ್ಕೆ ಸೇನಾ ಮುಖ್ಯಸ್ಥ ಜನರಲ್ ಮುಕುಂದ್ನ ನರವಾನೆ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ. ಇಲ್ಲಿಯವರೆಗೆ ಮಹಿಳೆಯರಿಗೆ ಭಾರತೀಯ ಸೇನೆಯಲ್ಲಿ ಭೂ ಕರ್ತವ್ಯಗಳಿಗೆ ಮಾತ್ರ ನಿಯೋಜನೆಯಾಗುವ ಅವಕಾಶವಿತ್ತು.