ಛತ್ತೀಸ್ ಗಢದ ಖುಂಟಿ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಜಸ್ಪುರ್ ಜಿಲ್ಲೆಯ ಪೊಲೀಸರ ನೆರವಿನಿಂದ ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಖುಂಟಿ ಜಿಲ್ಲೆಯ ಟಾರ್ಪಾ ನಿವಾಸಿಯಾಗಿರುವ ಸ್ಥಳೀಯ ಪತ್ರಕರ್ತನ 28 ವರ್ಷದ ಮಗ ಸಂಕೇತ್ ಮಿಶ್ರಾ ಮೃತದೇಹ ಜನವರಿ 7 ರಂದು ಕರ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂಡು ಬಂದಿತ್ತು. ಪೊಲೀಸ್ ಅಧಿಕಾರಿ ಟೊರ್ಪಾ ಪ್ರಕಾಶ್ ತಿವಾರಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದ್ದು, ವೈಜ್ಞಾನಿಕ ಮತ್ತು ತಾಂತ್ರಿಕ ಆಧಾರದ ಮೇಲೆ ತನಿಖೆ ಕೈಗೊಂಡ ತಂಡ ಮೃತ ವ್ಯಕ್ತಿ ಸ್ಥಳೀಯ ಪತ್ರಕರ್ತನ 28 ವರ್ಷದ ಪುತ್ರ ಸಂಕೇತ್ ಮಿಶ್ರಾ ಎನ್ನುವುದನ್ನು ಗುರುತಿಸಿ ತನಿಖೆ ಮುಂದುವರೆಸಿದ್ದಾರೆ.
ಸಂಕೇತ್ ಮಿಶ್ರಾ ತನ್ನ ಅತ್ತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆ ತನ್ನ ಚಾಲಕ ಬಿರ್ಸಾ ಮುಂಡಾ ಜೊತೆಗೂ ಅನೈತಿಕ ಸಂಬಂಧ ಬೆಳೆಸಿದ್ದಳು. ಇದೇ ವಿಚಾರಕ್ಕೆ ಗಲಾಟೆಯಾಗಿ ಸಂಕೇತ್ ಮಿಶ್ರಾನನ್ನು ಕೊಲೆ ಮಾಡಿ ಮೃತದೇಹವನ್ನು ಸುಡಲಾಗಿತ್ತು. ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಅಪರಾಧ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಖುಂಟಿ ಪೊಲೀಸ್ ಅಧೀಕ್ಷಕರು ಅಶುತೋಷ್ ಶೇಖರ್ ತಿಳಿಸಿದ್ದಾರೆ.