ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯದ ನಾಟಕೀಯ ಬೆಳವಣಿಗೆಗಳಿಗೆ ಸದ್ಯಕ್ಕೆ ತೆರೆ ಬಿದ್ದಿದೆ. ಮುಖ್ಯಮಂತ್ರಿಯಾಗಿ ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಂಡಾಯದ ಬಾವುಟ ಬೀಸಿ ಮೊದಲಿಗೆ ಗುಜರಾತಿನ ಸೂರತ್ ಗೆ ತೆರಳಿದ್ದ ಶಾಸಕರುಗಳು ಬಳಿಕ ಗುವಾಹಟಿಯ ಪಂಚತಾರಾ ಹೋಟೆಲ್ ರಾಡಿಸನ್ ಬ್ಲೂ ನಲ್ಲಿ ಬೀಡು ಬಿಟ್ಟಿದ್ದರು. ಬಿಜೆಪಿ ನಾಯಕರ ಜೊತೆಗಿನ ಮಾತುಕತೆ ಬಳಿಕ ಇವರುಗಳು ಗೋವಾಕ್ಕೆ ಆಗಮಿಸಿ ದೋನಪೌಲದ ಪಂಚತಾರಾ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು.
ಏಕನಾಥ್ ಶಿಂಧೆ ಸರ್ಕಾರದ ಬಹುಮತ ಯಾಚನೆ ಹಿನ್ನೆಲೆಯಲ್ಲಿ ಇವರುಗಳೆಲ್ಲರೂ ಮುಂಬೈಗೆ ವಾಪಸ್ ಆಗಿದ್ದು, ಇದರ ಮಧ್ಯೆ ಗೋವಾದಲ್ಲಿದ್ದ ವೇಳೆ ಅದೇ ಹೋಟೆಲ್ನಲ್ಲಿ ಓರ್ವ ಪುರುಷ ಹಾಗೂ ಮಹಿಳೆ ನಕಲಿ ಹೆಸರಿನಲ್ಲಿ ವಾಸ್ತವ್ಯ ಹೂಡಿದ್ದ ಘಟನೆ ಬೆಳಕಿಗೆ ಬಂದಿದೆ.
ಬಂಡಾಯ ಶಾಸಕರು ಗೋವಾದಲ್ಲಿದ್ದ ವೇಳೆ ಅವರು ವಾಸ್ತವ್ಯ ಹೂಡಿದ್ದ ಹೋಟೆಲ್ ಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಅಲ್ಲಿಗೆ ಪತ್ರಕರ್ತರಿಗೂ ಪ್ರವೇಶವಿರಲಿಲ್ಲ. ಆದರೆ ಈ ಪುರುಷ ಹಾಗೂ ಮಹಿಳೆ ನಕಲಿ ಪ್ರೂಫ್ ನೀಡಿ ತಂಗಿದ್ದರೆನ್ನಲಾಗಿದ್ದು, ಯಾವ ಉದ್ದೇಶಕ್ಕೆ ಬಂದಿದ್ದರು ಎಂಬುದು ತಿಳಿದು ಬಂದಿಲ್ಲ.
ಪ್ರಾಥಮಿಕ ತನಿಖೆ ವೇಳೆ ಅವರುಗಳು ರಾಜಕೀಯ ಪಕ್ಷದ ಸದಸ್ಯರೆಂಬ ಸಂಗತಿ ಬಯಲಾಗಿದ್ದು, ಇದೀಗ ಗೋವಾ ಪೊಲೀಸರು ನಕಲಿ ಪ್ರೂಫ್ ನೀಡಿರುವ ಸಂಬಂಧ ಇಬ್ಬರ ವಿರುದ್ಧ ಕೇಸ್ ದಾಖಲಿಸಿದ್ದಾರೆ.