
ಬಹುಶಃ ಇವರಿಬ್ಬರು ಮತ್ತೆ ಒಬ್ಬರನ್ನೊಬ್ಬರು ನೋಡಬಹುದು ಅಂತಾ ಯಾವತ್ತೂ ಅಂದುಕೊಂಡಿರಲಿಕ್ಕಿಲ್ಲ. ಆದರೆ, ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹಿಬ್‌ನಲ್ಲಿ ಮತ್ತೆ ಸ್ನೇಹಿತರು ಒಂದಾಗಿದ್ದಾರೆ. ಭಾರತದಿಂದ 91 ವರ್ಷದ ಸರ್ದಾರ್ ಗೋಪಾಲ್ ಸಿಂಗ್ ಅವರು ಧಾರ್ಮಿಕ ವಿಧಿಗಳನ್ನು ನಿರ್ವಹಿಸಲು ಕರ್ತಾರಪುರಕ್ಕೆ ತೆರಳಿದ್ದರು.
ಈ ವೇಳೆ ತಮ್ಮ ಹಳೆಯ ಸ್ನೇಹಿತ 91 ವರ್ಷದ ಮೊಹಮ್ಮದ್ ಬಶೀರ್ ಅವರನ್ನು ಭೇಟಿಯಾಗಬಹುದೆಂಬ ನಿರೀಕ್ಷೆಯೂ ಇವರಿಗಿರಲಿಲ್ಲ.
ಇವರಿಬ್ಬರ ಪುನರ್ಮಿಲನದ ಬಗ್ಗೆ ಪಾಕಿಸ್ತಾನದ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಇಬ್ಬರೂ ಕೂಡ ತಮ್ಮ ಬಾಲ್ಯದ ಕಥೆಗಳನ್ನು ವಿವರಿಸಿದ್ದಾರೆ. ಪಾಕಿಸ್ತಾನದ ರಚನೆಯ ಮೊದಲು, ಸಿಂಗ್ ಮತ್ತು ಬಶೀರ್ ಇಬ್ಬರೂ ತಮ್ಮ ಯೌವನದಲ್ಲಿದ್ದಾಗ ಅವರು ಬಾಬಾ ಗುರುನಾನಕ್ ಅವರ ಗುರುದ್ವಾರಕ್ಕೆ ಭೇಟಿ ನೀಡುತ್ತಿದ್ದರಂತೆ. ಹಾಗೂ ಒಟ್ಟಿಗೆ ಕೂತು ಊಟ, ಚಹಾ ಸೇವಿಸುತ್ತಿದ್ದರಂತೆ. ಇದೀಗ ಇಬ್ಬರು ಹಳೆಯ ಸ್ನೇಹಿತರು ಪುನರ್ಮಿಲನವಾಗಿರುವುದಕ್ಕೆ ಬಹಳ ಸಂತೋಷಪಟ್ಟಿದ್ದಾರೆ.
ಹಳೆ ಸ್ನೇಹಿತರ ಪುನರ್ಮಿಲನದ ಬಗ್ಗೆ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಪಾಕಿಸ್ತಾನದೊಂದಿಗಿನ ಕರ್ತಾರ್‌ಪುರ ಕಾರಿಡಾರ್ ಅನ್ನು ಸಿಖ್ಖರ ಧರ್ಮಗುರು ಗುರುನಾನಕ್ ದೇವ್ ಅವರ ಜನ್ಮದಿನವಾದ ಗುರುಪುರಬ್‌ಗೆ ಕೇವಲ ಎರಡು ದಿನಗಳ ಮೊದಲು ಮತ್ತೆ ತೆರೆಯಲಾಗಿದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ತೀರ್ಥಯಾತ್ರೆಯನ್ನು ಮಾರ್ಚ್ 2020 ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಭಕ್ತರ ಮನವಿ ಮೇರೆಗೆ ಮತ್ತೆ ತೆರೆಯಲಾಗಿದೆ.