ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಕೆಲವೊಂದು ಎಲೆಕ್ಟ್ರಿಕ್ ವಾಹನಗಳು ಚಾರ್ಜ್ ಮಾಡುವಾಗ ಸ್ಪೋಟಿಸಿರುವ ಘಟನೆಗಳು ಈ ಹಿಂದೆ ನಡೆದಿದ್ದವು. ಇದೀಗ ಅದು ಮತ್ತೊಮ್ಮೆ ಮರುಕಳಿಸಿದೆ.
ಇತ್ತೀಚೆಗಷ್ಟೇ ಎರಡು ಎಲೆಕ್ಟ್ರಿಕ್ ಬೈಕುಗಳನ್ನು ಹೈದರಾಬಾದಿನ ಹರಿಬಾಬು ಎಂಬವರು ಖರೀದಿಸಿದ್ದು, ಸೋಮವಾರದಂದು ಈ ಎರಡು ವಾಹನಗಳನ್ನು ಚಾರ್ಜ್ ಮಾಡುವ ಸಲುವಾಗಿ ಮನೆಯ ಮುಂಭಾಗ ಚಾರ್ಜಿಂಗ್ ಗೆ ಹಾಕಿದ್ದರು.
ಈ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಎರಡೂ ಬೈಕುಗಳು ಸಹ ಸಂಪೂರ್ಣವಾಗಿ ಸುಟ್ಟು ಹೋಗಿವೆ. ಶನಿವಾರದಂದು ಸಹ ಇಂಥವುದೇ ಒಂದು ಘಟನೆ ಸಂಭವಿಸಿತ್ತು ಎಂದು ತಿಳಿದುಬಂದಿದೆ. ಎಲೆಕ್ಟ್ರಿಕ್ ವಾಹನಗಳು ಚಾರ್ಜ್ ಮಾಡುವ ವೇಳೆ ಸ್ಪೋಟಗೊಂಡಿರುವ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಕೇಂದ್ರ ಸರ್ಕಾರ ಈ ಹಿಂದೆಯೇ ಆದೇಶ ನೀಡಿದೆ. ಇದರ ಮಧ್ಯೆಯೂ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ.