ಲಖ್ನೋ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಭಾನುವಾರ ಪ್ರತಿಭಟನಾ ನಿರತ ರೈತರ ಮೇಲೆ ತಮ್ಮ ಕಾರ್ ಚಾಲನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಿಂದಾಗಿ ಇಬ್ಬರು ರೈತರು ಸಾವನ್ನಪ್ಪಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಲಖಿಂಪುರ್ ಖೇರಿಯ ಟಿಕುನಿಯಾದಲ್ಲಿ ಅಜಯ್ ಮಿಶ್ರಾ ಅವರ ಗ್ರಾಮವಾಗಿದ್ದು, ಅಲ್ಲಿ ನಡೆದ ಕಾರ್ಯಕ್ರಮಕ್ಕೆ ಮುನ್ನ ಕೇಂದ್ರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದರು, ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಮುಖ್ಯ ಅತಿಥಿಯಾಗಿದ್ದರು. ರೈತರು ಉಪಮುಖ್ಯಮಂತ್ರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಯೋಜಿಸಿದ್ದರು.
ಆಶಿಶ್ ಮಿಶ್ರಾ ಅವರು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಬರಮಾಡಿಕೊಳ್ಳಲು ಹೋದಾಗ ಅವರ ಕಾರಿನ ಮುಂದೆ ರೈತರು ಕಪ್ಪು ಬಾವು ಪ್ರದರ್ಶಿಸಿದ್ದಾರೆ. ಕೇಂದ್ರ ಸಚಿವರ ಮಗ ಪ್ರತಿಭಟನಾ ನಿರತ ರೈತರ ಮೇಲೆಯೇ ತನ್ನ ಕಾರ್ ಚಲಾಯಿಸಿದನೆಂದು ಆರೋಪಿಸಲಾಗಿದೆ.
ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಘಟನೆಯಲ್ಲಿ ಇಬ್ಬರಲ್ಲ, ಮೂವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದೆ.
ನಂತರ, ಕೋಪಗೊಂಡ ರೈತರು ಆಶಿಶ್ ಮಿಶ್ರಾ ಅವರ ಕಾರು ಸೇರಿದಂತೆ ಮೂರು ಕಾರುಗಳನ್ನು ಸುಟ್ಟು ಹಾಕಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಟಿಕುನಿಯಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಸ್ಥಳಕ್ಕೆ ಹೆಚ್ಚಿನ ಸಂಖ್ಯೆ ಪೊಲೀಸರನ್ನು ಕಳಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ.