ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾದಲ್ಲಿ ಉಸಿರಾಟದ ಕಾಯಿಲೆ ಏಕಾಏಕಿ ಹೆಚ್ಚಾಗಿದೆ. ಇದಕ್ಕೆಲ್ಲ ಕಾರಣ ಅಪಾಯಕಾರಿಯಾಗಿರೋ ‘ಅಡೆನೊವೈರಸ್’ ಎಂದು ಹೇಳಲಾಗ್ತಿದೆ. ಕಳೆದ ಒಂದು ವಾರದಲ್ಲಿ ಕೋಲ್ಕತ್ತಾದಲ್ಲಿ ಅಡೆನೊವೈರಸ್ ಸೋಂಕಿನಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಇದಲ್ಲದೆ ಆಸ್ಪತ್ರೆಯಲ್ಲಿ ಅನೇಕ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಡೆನೊವೈರಸ್ ಎಂದರೇನು?
ಇದೊಂದು ಸಾಮಾನ್ಯ ವೈರಸ್. ಸೌಮ್ಯವಾದ ಶೀತದಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಆದರೆ ಈ ಸೋಂಕು ಬಹಳ ಗಂಭೀರ ಸ್ವರೂಪ ಪಡೆಯಬಹುದು. ವಿಶೇಷವಾಗಿ ಶಿಶುಗಳು, ಚಿಕ್ಕ ಮಕ್ಕಳು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಅಡೆನೊವೈರಸ್ ಅಪಾಯಕಾರಿ.
ಅಡೆನೊವೈರಸ್ ಸೋಂಕಿತರಲ್ಲಿ ಜ್ವರ, ಕೆಮ್ಮು, ಗಂಟಲು ನೋವು, ನೆಗಡಿ, ಕಣ್ಣುಗಳಲ್ಲಿ ಊತ, ಅತಿಸಾರ ಮತ್ತು ವಾಂತಿಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ ಅಡೆನೊವೈರಸ್, ನ್ಯುಮೋನಿಯಾದಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.
ಅಡೆನೊವೈರಸ್ ಹೇಗೆ ಹರಡುತ್ತದೆ?
ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ ಹರಡಬಹುದು. ಆರೋಗ್ಯವಂತ ವ್ಯಕ್ತಿ ಕೂಡ ಸೋಂಕಿಗೆ ತುತ್ತಾಗಬಹುದು.
ಈ ವೈರಸ್ ಮೇಲ್ಮೈಗಳಲ್ಲಿ ಸಹ ಜೀವಂತವಾಗಿರುತ್ತದೆ. ಬಾಗಿಲಿನ ಹಿಡಿಕೆಗಳು, ಟೇಬಲ್, ಆಟಿಕೆಗಳ ಮೂಲಕ ಹರಡುವ ಸಾಧ್ಯತೆ ಇರುತ್ತದೆ.
ಅಡೆನೊವೈರಸ್ ಸೋಂಕಿತ ವ್ಯಕ್ತಿಯ ಮಲದ ಮೂಲಕ ಹರಡುವ ಅಪಾಯವಿರುತ್ತದೆ. ಮಕ್ಕಳ ಡೈಪರ್ ಬದಲಾಯಿಸುವಾಗ ಆರೋಗ್ಯವಂತ ವ್ಯಕ್ತಿಯು ಸೋಂಕಿತ ಮಲದೊಂದಿಗೆ ಸಂಪರ್ಕಕ್ಕೆ ಬಂದರೆ ಆತ ಕೂಡ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
ಅಡೆನೊವೈರಸ್ ಈಜುಕೊಳಗಳು ಅಥವಾ ಬಿಸಿನೀರಿನ ತೊಟ್ಟಿಗಳ ನೀರಿನ ಮೂಲಕವೂ ಹರಡಬಹುದು.
ಸೋಂಕಿನಿಂದ ಪಾರಾಗುವುದು ಹೇಗೆ?
ಅಡೆನೊವೈರಸ್ ಸೋಂಕು ತಗುಲದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಜನಸಂದಣಿ ಇರುವ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ತಪ್ಪಿಸಿ. ಮಕ್ಕಳಿಗೆ ಆಗಾಗ ಕೈ ತೊಳೆಯುವ ಅಭ್ಯಾಸವನ್ನು ಮಾಡಿಸಿ.
ಉತ್ತಮ ಆಹಾರವನ್ನು ಕೊಡಿ, ಇದರಿಂದ ಅವರ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅವರನ್ನ ಹೈಡ್ರೇಟ್ ಆಗಿಡಿ, ನೀರು ಜ್ಯೂಸ್‌ನಂತಹ ದ್ರವ ಪದಾರ್ಥಗಳನ್ನು ಕುಡಿಯಲು ಕೊಡಿ. ಮಕ್ಕಳಲ್ಲಿ ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.