ಬಿಹಾರ: ಮದ್ಯ ನಿಷೇಧದ ನಿಯಮಗಳು ಮತ್ತು ನಿಬಂಧನೆಗಳ ವಿಷಯದಲ್ಲಿ ಬಿಹಾರ ಪೊಲೀಸರು ಯಾವಾಗಲೂ ಕಟ್ಟುನಿಟ್ಟು. ಎಷ್ಟು ಕಟ್ಟುನಿಟ್ಟಾಗಿವೆಯೆಂದರೆ, ತಪ್ಪಿತಸ್ಥರ ಜತೆ ಅವರ ಪ್ರಾಣಿಗಳನ್ನೂ ಬಂಧಿಸಲಾಗುತ್ತದೆ. ಅಂಥದ್ದೇ ಒಂದು ವಿಲಕ್ಷಣ ಘಟನೆ ಇದಾಗಿದೆ.
ಮದ್ಯದ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ಎರಡು ಎತ್ತುಗಳನ್ನು ಒಂಬತ್ತು ತಿಂಗಳ ಬಳಿಕ ಪೊಲೀಸರು ಬಂಧನಮುಕ್ತಗೊಳಿಸಿದ್ದಾರೆ. ಹೀರಾ ಮತ್ತು ಮೋತಿ ಎಂಬ ಎರಡು ಎತ್ತುಗಳು ಇದಾಗಿವೆ. ಇವು ಎಳೆಯುತ್ತಿದ್ದ ಎತ್ತಿನ ಬಂಡಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಮದ್ಯದ ಕಳ್ಳಸಾಗಾಣಿಕೆ ಮಾಡುತ್ತಿದ್ದುದು ಕಂಡುಬಂದಿತ್ತು. ಗೋಪಾಲ್‌ಗಂಜ್‌ನ ಜಾಡೋಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪುರ್ ತೆಂಗರಾಹಿ ಗ್ರಾಮದ ಬಳಿ ಗಾಡಿ ಸಮೇತ ಮಾಲೀಕನನ್ನು ಬಂಧಿಸಲಾಗಿತ್ತು.
ಎತ್ತುಗಳ ಮೂಲ ಬೆಲೆ 38 ಸಾವಿರ ರೂಪಾಯಿಗಳು. ಅದನ್ನು 60 ಸಾವಿರ ರೂಪಾಯಿಗೆ ಹರಾಜಿಗೆ ಇಡಲಾಗಿತ್ತು. ಬೆಲೆ ಹೆಚ್ಚಿದ್ದರಿಂದ ಅವು ಮಾರಾಟವಾಗಿರಲಿಲ್ಲ. ಹಾಗಾಗಿ 9 ತಿಂಗಳ ಕಾಲ ಮಾಲೀಕನೇ ಈ ಎತ್ತುಗಳನ್ನು ಸಾಕುವ ಜವಾಬ್ದಾರಿ ನೀಡಲಾಗಿತ್ತು. ಆದರೆ ಬೇರೆ ಯಾವ ಕೆಲಸಕ್ಕೂ ಎತ್ತುಗಳನ್ನು ನೀಡಿರಲಿಲ್ಲ. ನಂತರ ಈ ಎತ್ತುಗಳನ್ನು ಈಗ ಅರ್ಧ ಬೆಲೆಗೆ ಮಾಲೀಕನಿಗೇ ಹರಾಜು ಮಾಡಲಾಗಿದೆ.