ಬೆಂಗಳೂರು: 18 ವರ್ಷಗಳ ಸ್ನೇಹ ಸಂಬಂಧವನ್ನೇ ದುರುಪಯೋಗ ಪಡಿಸಿಕೊಂಡ ಅಣ್ಣ-ತಮ್ಮ ಇಬ್ಬರು ಆಪ್ತ ಮಿತ್ರನಿಗೇ ಬರೋಬ್ಬರಿ 65 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ಮೂಲದ ಟೆಕ್ಕಿಯೊಬ್ಬರಿಗೆ ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿಗಳಾದ ಅಣ್ಣ-ತಮ್ಮ ಅಕ್ಷಯ್ ಕುಮಾರ್ ಹಾಗೂ ಭರತ್ ಎಂಬುವವರು ಸ್ನೇಹದ ಹೆಸರಲ್ಲಿ ಮೋಸ ಮಾಡಿದ್ದಾರೆ. ಹಂತ ಹಂತವಾಗಿ ಲಕ್ಷ ಲಕ್ಷ ಹಣ ಪಡೆದು ಬರೋಬ್ಬರಿ 65 ಲಕ್ಷ ರೂಪಾಯಿ ದೋಚಿದ್ದಾರೆ.
ಸ್ನೇಹಿತನ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡ ಸಹೋದರರು, ಹಣ ದೋಚಲು ಪಕ್ಕಾ ಪ್ಲಾನ್ ಮಾಡಿ ಈ ಕೃತ್ಯವೆಸಗಿದ್ದಾರೆ. ಅಪರಿಚಿತ ವ್ಯಕ್ತಿ ಬಳಿ ನಿನ್ನ ಖಾಸಗಿ ಫೋಟೋಗಳಿವೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಆತನಿಗೆ ಅರ್ಜೆಂಟಾಗಿ 12 ಲಕ್ಷ ಕೊಡಬೇಕು ಅಂತಾ ಟೆಕ್ಕಿಯನ್ನು ನಂಬಿಸಿದ್ದಾರೆ. ಗೆಳೆಯರ ಮಾತನ್ನು ನಂಬಿದ ಟೆಕ್ಕಿ ಅತಿ ವಿಶ್ವಾಸದಿಂದ ಹಂತ ಹಂತವಾಗಿ ಹೇಳಿದಷ್ಟು ಹಣ ಕೊಡುತ್ತಾ ಬಂದಿದ್ದಾನೆ.
ಬ್ಯಾಂಕ್ ನಲ್ಲಿ ಸಾಲ ಮಾಡಿ ಕೂಡ ಹಣ ನೀಡಿದ್ದು ಒಟ್ಟು 65 ಲಕ್ಷ ಹಣ ಕೊಟ್ಟಿದ್ದಾರೆ. ಆದರೆ ಆಪ್ತ ಸ್ನೇಹಿತರಾಗಿದ್ದರೂ ಮೋಸ ಮಾಡುತ್ತಿದ್ದಾರೆ ಎಂಬುದು ಅರಿವಾಗಲು ಹೆಚ್ಚು ದಿನ ಬೇಕಾಗಿಲ್ಲ. ಕೊನೆಗೂ ಗೆಳೆಯರ ಮೋಸ ಗೊತ್ತಾಗಿದೆ. ಮನನೊಂದ ಟೆಕ್ಕಿ ಗೆಳೆಯರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಸಹೋದರರನ್ನು ಪೊಲಿಸರು ಬಂಧಿಸಿ ತನಿಖೆ ನಡೆಸಿದ್ದಾರೆ.