ಬೆಂಗಳೂರು: ಹೆಲ್ಮೆಟ್ ಧರಿಸದೇ ವೇಗವಾಗಿ ಮಧ್ಯರಾತ್ರಿ ಬೈಕ್ ಓಡಿಸಿ ಶಿಕ್ಷಕಿ ಹಾಗೂ ಉಪನ್ಯಾಸಕ ಇಬ್ಬರೂ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕೆಂಗೇರಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ನರಸಪ್ಪ (51) ಹಾಗೂ ಕಿಡ್ಸ್ ಕೇರ್ ನ ಶಿಕ್ಷಕಿ ಉಲ್ಲಾಳದ ರಕ್ಷಾ (21) ಮೃತ ಪಟ್ಟಿದ್ದಾರೆ. ಅಪಘಾತದಲ್ಲಿ ಚಂದನ್ (23) ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಡರಾತ್ರಿ 11:45ರ ಸುಮಾರಿಗೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳದ ಮಾರುತಿ ನಗರದಲ್ಲಿ ಈ ದುರಂತ ಸಂಭವಿಸಿದೆ.
ಚಂದನ್ ಹಾಗೂ ಶಿಕ್ಷಕಿ ರಕ್ಷಾ ಮಧ್ಯರಾತ್ರಿ ಹೆಲ್ಮೆಟ್ ಧರಿಸದೇ ಮೋಜು-ಮಸ್ತಿಗಾಗಿ ವೇಗವಾಗಿ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಉಲ್ಲಾಳದ ಬಳಿ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಅಪಘಾತದಲ್ಲಿ ಎದುರಿನಿಂದ ಬಂದ ಬೈಕ್ ಸವಾರ ನರಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ರಭಸಕ್ಕೆ ಚಂದನ್ ಹಾಗೂ ರಕ್ಷಾ ಬೈಕ್ 50 ಮೀಟರ್ ನಷ್ಟು ದೂರಕ್ಕೆ ಉಜ್ಜಿಕೊಂಡು ಹೋಗಿದೆ. ರಕ್ಷಾರ ತಲೆಗೆ ಗಂಭೀರವಾದ ಗಾಯವಾಗಿತ್ತು. ಚಂದನ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಾಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಗಾಯಾಳು ಚಂದನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಲ್ಮೆಟ್ ಧರಿಸದೇ ಮೋಜಿಗಾಗಿ ವೇಗವಾಗಿ ಚಾಲನೆ ಹಾಗೂ ಅಜಾಗರೂಕ ಬೈಕ್ ಚಾಲನೆ ಹಿನ್ನೆಲೆಯಲ್ಲಿ ಚಂದನ್ ವಿರುದ್ಧ ಪ್ರಕರಣ ದಾಖಲಾಗಿದೆ.