
ಕಾರವಾರ: ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರರಿಗೆ ನೀಡಿದ ಆರೋಪದಡಿ ಇಬ್ಬರನ್ನು ಎನ್ಐಎ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಅಂಕೋಲಾ ತಾಲೂಕಿನ ಹಳವಳ್ಳಿಯ ಅಕ್ಷಯನಾಯಕ ಮತ್ತು ಕಾರವಾರ ತಾಲೂಕಿನ ಮುದಗಾದ ವೇತನ್ ತಾಂಡೇಲಾ ಬಂಧಿತರು ಎಂದು ಹೇಳಲಾಗಿದೆ. ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ವಿಚಾರಣೆಗಾಗಿ ಎನ್ಐಎ ಕೇಂದ್ರ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.
ಹನಿಟ್ರ್ಯಾಪ್ ಗೆ ಒಳಗಾಗಿ ಕದಂಬ ನೌಕಾನೆಲೆ ಮಾಹಿತಿಯನ್ನು ನೀಡಿದ ಆರೋಪದ ಮೇಲೆ ನೌಕಾನೆಲೆಯ ಹೊರಗುತ್ತಿಗೆ ನೌಕರರಾಗಿರುವ ಇವರಿಬ್ಬರನ್ನು ಬಂಧಿಸಲಾಗಿದೆ. ಪಾಕಿಸ್ತಾನದ ಐಎಸ್ಐ ಮಹಿಳೆ ಇವರನ್ನು ಹನಿಟ್ರ್ಯಾಪ್ ಮಾಡಿ ನೌಕಾನೆಲೆಯ ಕೆಲ ಯುದ್ಧ ನೌಕೆಯ ಮಾಹಿತಿ, ಇತರೆ ಭದ್ರತೆ ರಹಸ್ಯ ಮಾಹಿತಿಯನ್ನು ಪಡೆದುಕೊಂಡಿದ್ದಳು. ಇಬ್ಬರಿಗೂ ಎಂಟು ತಿಂಗಳ ಕಾಲ ಮಾಸಿಕ 5,000 ರೂ. ನೀಡಿದ್ದಳು ಎನ್ನಲಾಗಿದೆ.
2024ರ ಆಗಸ್ಟ್ ನಲ್ಲಿ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದು, ಇದೀಗ ಇಬ್ಬರನ್ನು ಬಂಧಿಸಿದ್ದಾರೆ.