ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಯಲ್ಲಿ ಹೂಳೆತ್ತುವ ಕಾಮಗಾರಿ ಮಾಡಿದ್ದ ಗುತ್ತಿಗೆದಾರನಿಗೆ ಟೆಂಡರ್ ಹಣ ನೀಡಲು ಲಂಚ ಪಡೆಯುತ್ತಿದ್ದ ನೀರಾವರಿ ಇಲಾಖೆಯ ಇಬ್ಬರು ನೌಕರರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನೀರಾವರಿ ನಿಗಮದ ಸೆಕ್ಷನ್ ಆಫೀಸರ್ ಕೊಟ್ರಪ್ಪ, ಕಚೇರಿಯ ಸಿಬ್ಬಂದಿ ಅರವಿಂದ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.20 ರೂ. ಲಂಚದ ಹಣ ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ತಾಲೂಕು ಗೊಂದಿ ಭದ್ರಾ ಬಲದಂಡೆ ನಾಲೆಯ ಹೂಳು ತೆಗೆಯುವ ಕಾಮಗಾರಿ 2024ರ ಜನವರಿಯಲ್ಲಿ ಪೂರ್ಣಗೊಂಡಿದ್ದು, ಕಾಮಗಾರಿಯ ಟೆಂಡರ್ ಹಣ 9.16 ಲಕ್ಷ ರೂ. ಗುತ್ತಿಗೆದಾರ ವಿ. ರವಿ ಅವರಿಗೆ ಮಂಜೂರಾಗಿರಲಿಲ್ಲ.
ಅವರು ಈ ಕುರಿತಾಗಿ ಅನೇಕ ಸಲ ಮನವಿ ಮಾಡಿದ್ದರೂ, ಟೆಂಡರ್ ಹಣ ಬಿಡುಗಡೆಗೆ ಕ್ರಮ ಕೈಗೊಂಡಿರಲಿಲ್ಲ. ಬಿಲ್ ಮಂಜೂರು ಮಾಡಲು 1.20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಡಿಬಿ ಹಳ್ಳಿಯ ಕಚೇರಿಯಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಹೆಚ್. ಮಂಜುನಾಥ್ ಚೌಧರಿ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಎಸ್. ಸುರೇಶ್, ಪ್ರಕಾಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.