ಬುಧವಾರದಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೊಕೆರ್ ನಾಗ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಸ್ಥಳೀಯ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಉಗ್ರರು ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸೇನಾಧಿಕಾರಿಗಳು ಹಾಗೂ ಓರ್ವ ಸ್ಥಳೀಯ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ.
ಪಾಕಿಸ್ತಾನ ಪೋಷಿತ ಲಷ್ಕರೆ ತಯ್ಯೆಬಾ ಸಂಘಟನೆ ಅಂಗಸಂಸ್ಥೆ, ‘ದಿ ರೆಸಿಸ್ಟೆನ್ಸ್ ಫ್ರಂಟ್’ ಜೊತೆಗೆ ನಂಟು ಹೊಂದಿದ್ದ ಈ ಉಗ್ರರು ಅಡಗಿ ಕುಳಿತ ಮಾಹಿತಿ ಪಡೆದ ಸೇನಾ ಪಡೆ ಸಿಬ್ಬಂದಿ, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದು, ಉಗ್ರರ ದಾಳಿಯಿಂದ ಗಾಯಗೊಂಡ ಸೇನಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಏರ್ಲಿಫ್ಟ್ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇದರ ಮಧ್ಯೆ ರಜೋರಿ ಜಿಲ್ಲೆಯಲ್ಲಿ ಉಗ್ರರ ಅಡಗು ತಾಣದ ಮೇಲೆ ಭದ್ರತಾ ಪಡೆಗಳು ನಡೆಸಿದ ದಾಳಿ ವೇಳೆ ಸೇನಾಪಡೆಗೆ ಸೇರಿದ ‘ಕೆಂಟ್’ ಎಂಬ ಶ್ವಾನ ಗುಂಡಿನ ಚಕಮಕಿ ಸಂದರ್ಭದಲ್ಲಿ ತನ್ನ ನೆಚ್ಚಿನ ಒಡೆಯನ ಪ್ರಾಣ ರಕ್ಷಣೆಗೆ ಅಡ್ಡ ನಿಂತು ಗುಂಡೇಟಿನಿಂದ ತಾನು ಮೃತಪಟ್ಟಿದ್ದರೂ ಸಹ ಯೋಧನ ಪ್ರಾಣವನ್ನು ರಕ್ಷಿಸಲು ಸಫಲವಾಗಿದೆ. ಈ ವಿಚಾರವನ್ನು ಸೇನೆ ಪ್ರಕಟಣೆಯ ಮೂಲಕ ಹಂಚಿಕೊಂಡಿದೆ.